ಉಡುಪಿ, ಜು. 01 (DaijiworldNews/AK):ಕೇರಳದ ಕುಂಬಳೆಯಿಂದ ನಾಪತ್ತೆಯಾಗಿದ್ದ ಪ್ರೇಮಿಗಳು ಇದೀಗ ಉಡುಪಿಯಲ್ಲಿ ಪತ್ತೆಯಾಗಿದ್ದಾರೆ. ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಸಾಮಾಜಿಕ ಕಾರ್ಯಕರ್ತರು ಜೋಡಿಗಳನ್ನು ಪತ್ತೆಹಚ್ಚಿದ್ದು, ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಮನೆಮಂದಿಗೆ ಸೂಚನೆ ನೀಡದೆ ಜೋಡಿಗಳು ನಾಪತ್ತೆಯಾಗಿದ್ದರು.

ಹುಡುಕಾಟ ನಡೆಸಿದರೂ, ಯುವಕ ಯುವತಿ ಪತ್ತೆಯಾಗಿರಲಿಲ್ಲ. ಈ ಕುರಿತಾಗಿ ಕುಂಬಳೆ ಪೋಲಿಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಕೇರಳದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರೇಮಿಗಳು ಕಂಡುಬಂದಿದ್ದು, ಯುವಕ ಯುವತಿಯ ವರ್ತನೆಯಲ್ಲಿ ಅನುಮಾನ ಕಂಡುಬಂದು ಈ ಬಗ್ಗೆ ವಿಚಾರಿಸಿದಾಗ, ಕುಂಬಳೆಯಿಂದ ನಾಪತ್ತೆಯಾಗಿದ್ದವರೆಂದು ಮಾಹಿತಿ ದೊರಕಿದೆ.
ತಕ್ಷಣವೇ ರೈಲ್ವೆ ಪೊಲೀಸರು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಇಳಿಸಿ, ಇಂದ್ರಾಳಿ ಸ್ಟೇಷನ್ ನ ಇನ್ಸ್ಪೆಕ್ಟರ್ ಮಧುಸೂದನ್ ಅವರಿಗೆ ಜೋಡಿಯನ್ನು ಒಪ್ಪಿಸಿದ್ದಾರೆ. ಪ್ರೇಮಿಗಳ ವಯಸ್ಸಿನಲ್ಲಿ ಅನುಮಾನಗೊಂಡು, ಮಕ್ಕಳ ಸಹಾಯವಾಣಿಗೆ ಸಹ ಮಾಹಿತಿಯನ್ನು ನೀಡಲಾಗಿದೆ.
ಸಮಾಜಸೇವಕ ನಿತ್ಯಾನಂದ ಒಳಕಾಡುರವರ ನೆರವು ಪಡೆದು ಪ್ರೇಮಿಗಳನ್ನು ಉಡುಪಿಯ ನಗರ ಮಹಿಳಾ ಪೋಲಿಸ್ ಠಾಣೆಯ ವಶಕ್ಕೆ ನೀಡಲಾಗಿದ್ದು, ಸ್ಥಳೀಯ ಪೊಲೀಸರು ಪ್ರೇಮಿಗಳನ್ನು ಕುಂಬಳೆಯ ಪೋಲಿಸರಿಗೆ ಒಪ್ಪಿಸಿದ್ದಾರೆ.