ಪುತ್ತೂರು, ಜು. 03 (DaijiworldNews/TA): ಬಿಜೆಪಿ ಮುಖಂಡನ ಪುತ್ರನ ಅತ್ಯಾಚಾರ ಆರೋಪ ಪ್ರಕರಣವನ್ನು ಖಂಡಿಸಿ ಹಾಗೂ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವತಿಯಿಂದ ಬುಧವಾರ ಪುತ್ತೂರು ನಗರಸಭೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ಎಸ್ಡಿಪಿಐ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಹಾಗೂ ಬಂಟ್ವಾಳ ಪುರಸಭಾ ಉಪಾಧ್ಯಕ್ಷ ಮನೀಶ್ ಅಲಿ, ರಾಜಕೀಯಕ್ಕಾಗಿ ಹಿಂದುಗಳ ಮನಸ್ಸಿನಲ್ಲಿ ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿರುವ ಸಂಘ ಪರಿವಾರದ ಹಿಂದು ನಾವೆಲ್ಲ ಒಂದು ಎಂಬ ಸ್ಲೋಗನ್ ವೇದಿಕೆಯ ರಾಜಕೀಯಕ್ಕೆ ಸೀಮಿತವಾಗಿದೆ. ಓರ್ವ ತಾಯಿಗೆ ನ್ಯಾಯ ನೀಡಲು ಸಾಧ್ಯವಾಗದ ಈ ಮುಖಂಡರ ಅಸಲಿಯತ್ತು ಈಗ ಗೊತ್ತಾಗಿದೆ. ಇವರಿಂದ ಇಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿಲ್ಲ ಎಂದು ಆರೋಪಿಸಿದರು. ಇದೇ ಊರಿನ ಶೋಭಾ ಕರಂದ್ಲಾಜೆ ಎಲ್ಲಿದ್ದಾರೆ? ಚಕ್ರವರ್ತಿ ಸೂಲಿಬೆಲೆ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಸಂಜೀವ ಮಠಂದೂರು ಅವರು ಯಾಕೆ ಸಂತ್ರೆಸ್ತೆಯ ಬೆನ್ನಿಗೆ ನಿಂತಿಲ್ಲ ಎಂದು ಪ್ರಶ್ನಿಸಿದರು.
ಸಂತ್ರಸ್ತೆಯ ತಾಯಿ ಮಾತನಾಡಿ, ನಾನು ಎಲ್ಲಾ ಸಮುದಾಯದ ಬಳಿಗೂ ಹೋಗಿದ್ದೇನೆ. ಎಲ್ಲರೂ ಮಗುವನ್ನು ತೆಗೆಸಿ ಎಂದು ಹೇಳಿದ್ದಾರೆ ಹೊರತು ಮದುವೆ ಮಾಡಿ ಕೊಡಬೇಕೆಂದು ಯಾರು ಹೇಳಿಲ್ಲ. ಹುಡುಗನ ಅಪ್ಪನಲ್ಲಿ ಮಾತನಾಡಿದಾಗ ಅವರು ನಿಮ್ಮ ಮಗು ಬೇರೆ ಅಲ್ಲ ನನ್ನ ಮಗು ಬೇರೆ ಅಲ್ಲ ಮದುವೆ ಮಾಡಿಸುತ್ತೇನೆ ಎಂದು ಹೇಳಿದ್ದರು. ಇದೀಗ ಹುಡುಗನನ್ನು ಅವರ ಅಪ್ಪನೇ ಅಡಗಿಸಿಟ್ಡಿದ್ದಾರೆ. ನನಗೆ ನ್ಯಾಯ ಸಿಗದಾಗ ನಾನು ನನ್ನ ಮಗುವಿಗೆ ನ್ಯಾಯಕ್ಕಾಗಿ ಬೇಕಾದ ಸಂಘಟನೆಯಲ್ಲಿ ಕೇಳಿಕೊಂಡಿದ್ದೇನೆ ಎಂದರು. ಪ್ರತಿಭಟನೆಯಲ್ಲಿ SDPI ಜಿಲ್ಲಾ ಸದಸ್ಯೆ ಝೀನತ್ ಬಂಟ್ವಾಳ, SDPI ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಶ್ರಪ್ ಬಾವು, ತಾಜುದ್ದಿನ್ ಸಾಲ್ಮರ ಮಾತನಾಡಿದರು.