ಕುಂದಾಪುರ, ಜು. 03 (DaijiworldNews/TA): ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ಪ್ರತಿಭಟನೆ ಮಾಡಿ ಅನೇಕ ಸುಳ್ಳು ವಿಚಾರಗಳನ್ನು ಹೇಳಿದ್ದಾರೆ. ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ. ಕುಂದಾಪುರದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯುಜಿಡಿ ಯೋಜನೆಯಂತಹ ಅನೇಕ ಸಮಸ್ಯೆಗಳು ಜನರನ್ನು ಕಾಡುತ್ತಿರುವಾಗ ಬಿಜೆಪಿಯವರು ಅದನ್ನು ಬಿಟ್ಟು ಯಾವುದೋ ಸುಳ್ಳುಗಳನ್ನು ಹೇಳಿ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಯವರು ಹೇಳಿದ ಸುಳ್ಳಿನ ಸತ್ಯಾಂಶಗಳನ್ನು ಹೇಳಲು ಕಾಂಗ್ರೆಸ್ ಸತ್ಯದರ್ಶನ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ಹೇಳಿದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕುಂದಾಪುರ ಪುರಸಭೆ ಎದುರು ಬುಧವಾರ 9/11 ಜಾರಿ, 53 57 ಅಕ್ರಮ ಸಕ್ರಮ ಅರ್ಜಿ ತಿರಸ್ಕಾರ, ಪಿಂಚಣಿ ರದ್ದತಿ, ವಿದ್ಯುತ್ ದರ ಏರಿಕೆ ಖಂಡಿಸಿ ಬಿಜೆಪಿ ಸುಳ್ಳಿನ ಪ್ರತಿಭಟನೆಗೆ ಕಾಂಗ್ರೆಸ್ ಸತ್ಯದರ್ಶನ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಎರಡು ಕಂತುಗಳಲ್ಲಿ ಬರುವ ರಾಜೀವ ಗಾಂಧಿ ಅಭಿವೃದ್ಧಿ ನಿಗಮದ ದುಡ್ಡುಗಳಲ್ಲಿ ನಿಯತ್ತಾಗಿ ಪ್ರತಿ ಅವಧಿಯಲ್ಲಿ ಬರುತ್ತಿದೆ. ಆದರೆ ಕೇಂದ್ರ ಸರಕಾರದ ದುಡ್ಡು ಬರುತ್ತಿಲ್ಲ.
ಸಿದ್ಧರಾಮಯ್ಯ ಸರಕಾರ ಬಂದ ಬಳಿಕ ಕುಂದಾಪುರ ತಾಲೂಕು ಆಸ್ಪತ್ರೆಗೆ ಎಂಟು ಡಯಾಲಿಸಿಸ್ ಯಂತ್ರಗಳು ಬಂದಿದ್ದು, ಸುಮಾರು 80 ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 40 ಲಕ್ಷ ರೂ. ಅನುದಾನದಲ್ಲಿ ಲ್ಯಾಬೋರೇಟರಿಯನ್ನು ಆಧುನೀಕರಣ, ಎಸ್ಟಿಪಿ ಯೋಜನೆಗೆ 20 ಲಕ್ಷ ಅನುದಾನ ಬಂದಿದೆ ಎಂದು ಅವರು ಹೇಳಿದರು. ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಜಿಲ್ಲಾ ವಕ್ತಾರ ವಿಕಾಸ್ ಹೆಗ್ಡೆ ಬಸ್ರೂರು, ನಾಮನಿರ್ದೇಶಿತ ಸದಸ್ಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.