ಉಡುಪಿ, ಜು. 04 (DaijiworldNews/TA): ಬ್ರಹ್ಮಾವರ ತಾಲೂಕಿನ ವಂಡಾರು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕುಡುಬಿ ಸಮುದಾಯದ ಯುವಕನಿಗೆ ಒಂಟಿ ಕಾಲಿನಲ್ಲಿ ನಿಲ್ಲಿಸಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ, ಕುಡುಬಿ ಸಮಾಜೋದ್ಧಾರಕ ಸಂಘ, ಉಡುಪಿ ಜಿಲ್ಲೆಯ ವತಿಯಿಂದ ವಂಡಾರು ಮಾವಿನಕಟ್ಟೆ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಈ ಫ್ಯಾಕ್ಟರಿಯಲ್ಲಿ ಇತ್ತೀಚೆಗೆ ಪ್ರವೀಣ್ ಎಂಬ ಕಾರ್ಮಿಕನಿಗೆ ಕಿರುಕುಳ ನೀಡಲಾದ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರ್ಮಿಕ ಇಲಾಖೆಗೆ ದೂರು ನೀಡಲಾಗಿದ್ದು ಆರೋಪಿ ಯಾವುದೇ ಪ್ರಭಾವ ಹೊಂದಿದ್ದರೂ ಕೂಡ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಬೇಕು. ಅಗತ್ಯ ಕ್ರಮ ವಹಿಸದಿದ್ದಲ್ಲಿ ಜಿಲ್ಲಾಧಿಕಾರಿ, ಕಾರ್ಮಿಕ ಇಲಾಖೆ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ದೂರುದಾರ ಪ್ರವೀಣ್ ಮಾತನಾಡಿ, ಫ್ಯಾಕ್ಟರಿಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಅಂದು ಅಡಚಣೆ ಯಾಗಿದ್ದು ಈ ಬಗ್ಗೆ ಸಂಸ್ಥೆಯ ಬಳಿ ಹೋದಾಗ ನನ್ನೊಡನೆ ಅಮಾನವೀಯವಾಗಿ ವರ್ತಿಸಿದ್ದರು. ಸಂಜೆಯ ತನಕ ನನ್ನನ್ನು ನಿಲ್ಲಿಸಿದ್ದರು. ನಾನೇನು ತಪ್ಪು ಮಾಡಿಲ್ಲ. ಈ ಬಗ್ಗೆ ಠಾಣೆಗೆ ದೂರು ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕುಡುಬಿ ಸಮಾಜೋದ್ಧಾರಕ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ರವಿ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.