ಉಳ್ಳಾಲ, ಜು. 04 (DaijiworldNews/AA): ಕಾಣೆಯಾಗಿದ್ದ 25 ವರ್ಷದ ಯುವಕನೋರ್ವನ ಮೃತದೇಹ ಉಚ್ಚಿಲ ರೈಲ್ವೆ ಗೇಟ್ ಬಳಿಯ ರೈಲ್ವೆ ಹಳಿಗಳ ಮೇಲೆ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.

ಮೃತನನ್ನು ಕೋಟೆಕಾರ್ನ ಬೀರಿ ನಿವಾಸಿ ಮೋಹನ್ದಾಸ್ ಅಮೀನ್ ಅವರ ಪುತ್ರ ತೇಜಸ್ (25) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ತೇಜಸ್ ಜುಲೈ 2ರ ರಾತ್ರಿ ತನ್ನ ಕೋಣೆಯಿಂದ ಕಾಣೆಯಾಗಿದ್ದಾನೆ ಎನ್ನಲಾಗಿದೆ.
ತೇಜಸ್ ಕಾಣೆಯಾದ ಬಳಿಕ ಅವರ ತಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಇದೀಗ ಇಂದು ಬೆಳಿಗ್ಗೆ, ತೇಜಸ್ ಮೃತದೇಹವು ಉಚ್ಚಿಲ ಸಮೀಪದ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆ ಶಂಕೆಯ ಮೇಲೆ ತನಿಖೆ ನಡೆಸುತ್ತಿದ್ದಾರೆ.
ತೇಜಸ್ ಮಣಿಪಾಲ್ ಸಮೂಹದ ಶೈಕ್ಷಣಿಕ ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಯಾಗಿದ್ದರು ಎನ್ನಲಾಗಿದೆ. ಅವರ ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.