ಮಂಗಳೂರು, ಜು. 04 (DaijiworldNews/TA): 'ರಂಗಸಂಗಾತಿ' ಸಾಂಸ್ಕೃತಿಕ ಪ್ರತಿಷ್ಠಾನದ 17ನೇ ವಾರ್ಷಿಕೋತ್ಸವ ಜು. 7ರಂದು ಸಂಜೆ 5.30ರಿಂದ ಮಂಗಳೂರಿನ ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ LCRI ಸಭಾಂಗಣದಲ್ಲಿ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ನಡೆಯಲಿದೆ ಎಂದು ಸಂಸ್ಥೆಯ ವಿಶ್ವಸ್ಥ ಮಂಡಳಿಯ ಸದಸ್ಯ ಶಶಿರಾಜ್ ಕಾವೂರು ಹೇಳಿದರು.

ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಮುಖ ಪ್ರತಿಭೆ, ರಂಗಸಂಗಾತಿಯ ಸ್ಥಾಪಕ ಸದಸ್ಯ ದಿವಂಗತ ಭಾಸ್ಕರ ನೆಲ್ಲಿತೀರ್ಥ ಅವರ ನೆನಪಲ್ಲಿ ನೀಡಲಾಗುವ ರಂಗ ಭಾಸ್ಕರ 2025 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಈ ಸಂದರ್ಭನಡೆಯಲಿದ್ದು, ಈ ಬಾರಿಯ ಪ್ರಶಸ್ತಿಗೆ ಹಿರಿಯ ನಟ, ನಿರ್ದೇಶಕ, ಚಲನಚಿತ್ರ ನಟ ಲಕ್ಷ್ಮಣ ಕುಮಾರ್ ಮಲ್ಲೂರು ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು 15 ಸಾವಿರ ರೂ. ನಗದು, ಫಲಕ, ಸ್ಮರಣಿಕೆಯನ್ನು ಒಳಗೊಂಡಿದೆ. ಸಭಾ ಕಾರ್ಯಕ್ರಮದ ಬಳಿಕ ಹೆಗ್ಗೋಡಿನ ಜನಮನದಾಟ ತಂಡದಿಂಡ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮಾಯಾಮೃಗೆ, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಪ್ತಾಕ್ ಅವರ ಎದೆಯ ಹಣತೆ ನಾಟಕ ಪ್ರದರ್ಶನಗೊಳ್ಳಲಿದ್ದು ಪ್ರವೇಶ ಉಚಿತ ಎಂದರು. ಸಂಸ್ಥೆಯ ವಿಶ್ವಸ್ಥ ಮಂಡಳಿ ಸದಸ್ಯರಾದ ಕರುಣಾಕರ ಶೆಟ್ಟಿ ನಾಗೇಶ್ ಶೆಟ್ಟಿ ಬಜಾಲ್, ರಂಜನ್ ಬೋಳೂರು, ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.