ಉಡುಪಿ, ಜು. 06 (DaijiworldNews/AK): ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶ್ರಮಿಸುತ್ತಿರುವ ಉಡುಪಿ ಜಿಲ್ಲೆಯ ಹೊರ ಗುತ್ತಿಗೆ ನೌಕರರಿಗೆ ಕಳೆದ 4 ತಿಂಗಳಿಂದ ವೇತನ ಪಾವತಿಯಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಈ ಸಮಸ್ಯೆ ತಲೆದೂರಿದ್ದು, ಕೆಲವು ಜಿಲ್ಲೆಗಳಲ್ಲಿ 6 ತಿಂಗಳುಗಳಿಂದ ವೇತನ ಪಾವತಿಯಾಗದೆ ರಾಜ್ಯಾದ್ಯಂತ ಸುಮಾರು 3500 ಸಿಬ್ಬಂದಿಗಳು ತೊಂದರೆ ಸಿಲುಕಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಎಡಿಪಿಸಿ, ಡಿಎಮ್ಐಎಸ್,ಡಿಐಇಸಿ,ಅಕೌಂಟ್ ಮ್ಯಾನೇಜರ್ ಹಾಗೂ ತಾಲೂಕು ಮಟ್ಟದಲ್ಲಿ ತಾಂತ್ರಿಕ ಸಂಯೋಜಕರು,ತಾಂತ್ರಿಕ ಸಾಹಾಯಕರು,ಟಿಎಮ್ಐಎಸ್, ಟಿಐಇಸಿ ಹಾಗೂ ಆಡಳಿತ ಸಹಾಯಕರು, ಬಿ.ಎಫ್. ಟಿ ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ನರೇಗಾ ಡಾಟಾ ಎಂಟ್ರಿ ಆಪರೇಟರ್ಸ್ ಗ್ರಾಮ ಕಾಯಕ ಮಿತ್ರರು ಕೆಲಸ ನಿರ್ವಹಿಸುತ್ತಿದ್ದಾರೆ. ವೇತನ ವಿಳಂಬದಿಂದ ಕ್ಷೇತ್ರ ಭೇಟಿ ಸೇರಿದಂತೆ ಜೀವನ ನಿರ್ವಹಣೆ ದುಸ್ಥರವಾಗಿದೆ.
ಜುಲೈ 07 ರಿಂದ ಅಸಹಕಾರ ಪ್ರತಿಭಟನೆ
ವೇತನ ಪಾವತಿಗಾಗಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಜರುಗದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಜುಲೈ 07 ರಿಂದ ಅಸಹಕಾರ ಪ್ರತಿಭಟನೆಗೆ ಮುಂದಾಗಿದೆ. ಉಡುಪಿ ಜಿಲ್ಲೆಯಲ್ಲೂ ಜಿಲ್ಲಾ ಸಂಘದಿಂದ ಪ್ರತಿಭಟನೆಗೆ ಕೈಜೋಡಿಸಿದ್ದು ಈಗಾಗಲೇ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಯವರಿಗೆ ಪತ್ರ ನೀಡಲಾಗಿದೆ.