ಮಂಗಳೂರು, ಜು. 06 (DaijiworldNews/AA): ಮಂಗಳೂರಿನ ಸೈಂಟ್ ಆಗ್ನೆಸ್ ಸೆಂಚುರಿ ಆಡಿಟೋರಿಯಂನಲ್ಲಿ ಅದ್ಧೂರಿಯಾಗಿ ನಡೆದ 'ಕೊಂಕ್ಣಿ ಪರಬ್' ಕಾರ್ಯಕ್ರಮದೊಂದಿಗೆ ದಾಯ್ಜಿವರ್ಲ್ಡ್ ಮೀಡಿಯಾ ಲಿಮಿಟೆಡ್ ತನ್ನ ಬೆಳ್ಳಿಹಬ್ಬವನ್ನು ಸಂಭ್ರಮದಿಂದ ಆಚರಿಸಿತು.






























ಈ ಕಾರ್ಯಕ್ರಮಕ್ಕೆ ಲೋಕೋಪಕಾರಿ ಹಾಗೂ ಅನಿವಾಸಿ ಭಾರತೀಯ ಉದ್ಯಮಿ ಮೈಕೆಲ್ ಡಿಸೋಜಾ, ವಿ.ಕೆ. ಫರ್ನಿಚರ್ಸ್ ಅಂಡ್ ಎಲೆಕ್ಟ್ರಾನಿಕ್ಸ್ನ ವ್ಯವಸ್ಥಾಪಕ ನಿರ್ದೇಶಕ ವಿಠಲ್ ಕುಲಾಲ್, ಹಾಗೂ ವಜ್ರ ರಿಯಾಲಿಟೀಸ್ನ ವ್ಯವಸ್ಥಾಪಕ ಪಾಲುದಾರರಾದ ರ್ಯಾಂಬೋ ಡಿಸೋಜಾ ಮತ್ತು ಕಿಶೋರ್ ಪೂಜಾರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ದಾಯ್ಜಿವರ್ಲ್ಡ್ನ 25 ವರ್ಷಗಳ ಮೈಲಿಗಲ್ಲನ್ನು ಶ್ಲಾಘಿಸಿದ ಮೈಕೆಲ್ ಡಿಸೋಜಾ ಅವರು, "ದಾಯ್ಜಿವರ್ಲ್ಡ್ ತನ್ನ ಸುದ್ದಿ ಪ್ರಕಟಣೆಯಲ್ಲಿನ ವಿಶ್ವಾಸಾರ್ಹತೆ ಮತ್ತು ಸಾಮಾಜಿಕ ಕಳಕಳಿಗೆ ಹೆಸರುವಾಸಿಯಾಗಿದೆ. ಇದು ಸ್ಥಳೀಯ ಮತ್ತು ಜಾಗತಿಕ ಸಮುದಾಯದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿದೆ. ಇದರ ಬೆಳ್ಳಿಹಬ್ಬ ಆಚರಣೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಸಂತೋಷವಾಗಿದೆ" ಎಂದರು.
ದಾಯಿವರ್ಲ್ಡ್ ಮೀಡಿಯಾ ಲಿಮಿಟೆಡ್ನ ನಿರ್ದೇಶಕ ಮೆಲ್ವಿನ್ ರೊಡ್ರಿಗಸ್ ಗಣ್ಯರನ್ನು ಸ್ವಾಗತಿಸಿದರು. ಆದರೆ ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ವಾಲ್ಟರ್ ನಂದಳಿಕೆ ಕೆಲವು ಹಾಸ್ಯಮಯ ಪ್ರಸಂಗಗಳನ್ನು ಹಂಚಿಕೊಂಡರು. ಹಾಗೂ ವೆಬ್ ಪೋರ್ಟಲ್ನ 31 ಕೋಟಿ ರೂ.ಗೂ ಅಧಿಕ ಮೊತ್ತದ ದತ್ತಿ ಉಪಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಸಂಜಯ್ ರೋಡ್ರಿಗಸ್ ಪರಿಕಲ್ಪನೆಯ ಮ್ಯೂಸಿಕಲ್ ಕಾನ್ಸರ್ಟ್ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಇದು ತನ್ನ ನವೀನ ವಿಧಾನಕ್ಕಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು. ಈ ಸಂಗೀತ ಕಾರ್ಯಕ್ರಮವು ಪ್ರಖ್ಯಾತ ಸಂಗೀತ ನಿರ್ದೇಶಕರಾದ ರೋಷನ್ ಕ್ರಾಸ್ತಾ ಬೇಳ ಮತ್ತು ಮೆಲ್ವಿನ್ ಲೀಮಾ ಭಾಗವಹಿಸಿದ್ದರು. ಪ್ರಸಿದ್ಧ ವಾದ್ಯಸಂಗೀತಗಾರರಾದ ವೀಕ್ಷಿತ್ ಉಡುಪಿ, ಪ್ರಜ್ವಲ್ ಫ್ರಾಂಟೆರೊ, ಸ್ಟಾಲಿನ್ ಡಿಸೋಜಾ ಮತ್ತು ಸಂಜಿತ್ ರೋಡ್ರಿಗಸ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕೊಂಕಣಿ ಸಂಗೀತ ಲೋಕದ ಅತಿ ಬೇಡಿಕೆಯ ಗಾಯಕರಾದ ಝೀನಾ ಪೆರೇರಾ, ಶಿಲ್ಪಾ ಕುಟೀನ್ಹಾ, ಜೋಶಲ್ ಡಿಸೋಜಾ, ಲಾಯ್ ವ್ಯಾಲೆಂಟೈನ್, ಪಲೋಮಾ ರೊಡ್ರಿಗಸ್ ಮತ್ತು ಇತರರು ಮ್ಯೂಸಿಕಲ್ ಕಾನ್ಸರ್ಟ್ ನಲ್ಲಿ ಪ್ರದರ್ಶನ ನೀಡಿದರು. ಇವರೆಲ್ಲರ ಮನಸೆಳೆಯುವ ಮತ್ತು ಉತ್ಸಾಹಭರಿತ ಗಾಯನವು ಪ್ರೇಕ್ಷಕರು ಮಂತ್ರಮುಗ್ಧರನ್ನಾಗಿಸಿತು.
ಅರ್ಬನ್ ಗ್ರೂವ್ನ ನೃತ್ಯ ತಂಡವು ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಕಾರ್ಯಕ್ರಮಕ್ಕೆ ಮೆರುಗು ನೀಡಿತು. 75 ಮಕ್ಕಳು ಮತ್ತು 35 ಹಿರಿಯರು ಜೋಶಲ್ ಡಿಸೋಜಾ ಸಂಯೋಜಿಸಿದ ಕೊಂಕಣಿ ಹಾಡುಗಳ ಗಾಯನ ಜುಗಲ್ಬಂದಿಯಲ್ಲಿ ಭಾಗವಹಿಸಿದ್ದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
ಕೋಮಲ್ ಜೆನಿಫರ್ ಡಿಸೋಜಾ ಅವರು ಕಾರ್ಯಕ್ರಮವನ್ನು ಆಕರ್ಷಕವಾಗಿ ನಿರೂಪಿಸಿದರು. ಈ ಕಾರ್ಯಕ್ರಮವನ್ನು ಜನಪ್ರಿಯ ಬರಹಗಾರ ಹಾಗೂ ನಿರ್ದೇಶಕ ಸ್ಟ್ಯಾನಿ ಬೇಳ ವಿನ್ಯಾಸಗೊಳಿಸಿದರು. ದಾಯ್ಜಿವರ್ಲ್ಡ್ನ ನಿರ್ದೇಶಕ ಅಲೆಕ್ಸಿಸ್ ಕ್ಯಾಸ್ಟೆಲಿನೊ ಮತ್ತು ಪ್ರವೀಣ್ ತಾವ್ರೋ, ಲಾರೆನ್ಸ್ ಡಿಸೋಜಾ, ಕಿಶೋರ್ ಗೊನ್ಸಾಲ್ವೆಸ್ ಮತ್ತು ರೊನಾಲ್ಡ್ ನಜ್ರೆತ್ ಅವರೊಂದಿಗೆ (ದಾಯ್ಜಿವರ್ಡ್ ಕುಟುಂಬ ಸದಸ್ಯರು) ಪ್ರಾಯೋಜಕರನ್ನು ಗೌರವಿಸಿದರು.