ಪುತ್ತೂರು,ಜು. 06 (DaijiworldNews/AK): ಜಿಲ್ಲೆಯಲ್ಲಿ ನಿಲ್ಲದ ನೈತಿಕ ಪೊಲೀಸ್ ಗಿರಿ. ಬೀರಮಲೆ ಬೆಟ್ಟದಲ್ಲಿ ಅಪ್ರಾಪ್ತ ಬಾಲಕ ಮತ್ತು ಬಾಲಕಿಗೆ ಕಿರುಕುಳ ನೀಡಿ, ಘಟನೆಯನ್ನು ಚಿತ್ರೀಕರಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊವನ್ನು ಹರಿಬಿಟ್ಟು ಜೊತೆಗೆ ಅವಹೇಳನಕಾರಿ ಮತ್ತು ಧರ್ಮ ಆಧಾರಿತ ನಿಂದನೆಗಾಗಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪುತ್ತೂರು ಕಸ್ಬಾ ಗ್ರಾಮದ ಬೀರಮಲೆ ಬೆಟ್ಟದಲ್ಲಿ ಜುಲೈ 5 ರಂದು ಈ ಘಟನೆ ನಡೆದಿದೆ. . ಬಾಲಕನ ತಂದೆ ಸಲ್ಲಿಸಿದ ಪೊಲೀಸ್ ದೂರಿನ ಪ್ರಕಾರ, ಅವರ ಅಪ್ರಾಪ್ತ ವಯಸ್ಸಿನ ಮಗ ಪರಿಚಯಸ್ಥ ಹುಡುಗಿಯ ಜೊತೆ ಸಮಯ ಕಳೆಯುತ್ತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರ ಬಳಿಗೆ ಬಂದು ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆಂದು ಬೆದರಿಕೆ ಹಾಕಿದರು ಎಂದು ಆರೋಪಿಸಲಾಗಿದೆ.
ಬೆದರಿಕೆ ಮತ್ತು ದ್ವೇಷ ಭಾಷಣ ಎರಡನ್ನೂ ಒಳಗೊಂಡಿದ್ದ ಈ ವೀಡಿಯೊವನ್ನು ನಂತರ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಯಿತು. ದೂರಿನ ಮೇರೆಗೆ, ಪೊಲೀಸರು ಅಪರಾಧ ಸಂಖ್ಯೆ 54/2025 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) 2023 ರ ಅಡಿಯಲ್ಲಿ ಕಾನೂನುಬಾಹಿರ ಬಂಧನ, ಹಲ್ಲೆ, ಬೆದರಿಕೆ ಮತ್ತು ಕೋಮು ದ್ವೇಷವನ್ನು ಪ್ರಚೋದಿಸುವುದು ಸೇರಿದಂತೆ ಹಲವಾರು ಸೆಕ್ಷನ್ಗಳನ್ನು ಅನ್ವಯಿಸಲಿದೆ. ಇಬ್ಬರು ಅಪ್ರಾಪ್ತ ವಯಸ್ಕರ ಗೌಪ್ಯತೆಯನ್ನು ಉಲ್ಲಂಘಿಸುವುದಲ್ಲದೆ, ಕೋಮು ಸಾಮರಸ್ಯವನ್ನು ಕದಡುವ ಬೆದರಿಕೆಯನ್ನುಂಟು ಮಾಡುವ ಪ್ರಕರಣದಲ್ಲಿ ಈ ವೀಡಿಯೊವನ್ನು ಈಗ ಸಂಭಾವ್ಯ ಸಾಕ್ಷಿಯಾಗಿ ಪರಿಗಣಿಸಲಾಗುತ್ತಿದೆ.
ಆರೋಪಿಗಳನ್ನು ಕಡಬದ ಕುದ್ಮಾರು ನಿವಾಸಿ ಪುರುಷೋತ್ತಮ (43) ಮತ್ತು ಪುತ್ತೂರಿನ ಆರ್ಯಾಪು ನಿವಾಸಿ ರಾಮಚಂದ್ರ (38) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ.
ಪ್ರಕರಣದ ಸಂತ್ರಸ್ಥರಿಬ್ಬರೂ ಅಪ್ರಾಪ್ತರಾಗಿರುವುದರಿಂದ, ಪ್ರಕರಣದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯಾವುದೇ ಮಾಧ್ಯಮಗಳು ಪ್ರಸಾರ ಮಾಡುವಾಗ ಬಾಲ ನ್ಯಾಯ ಕಾಯ್ದೆ ಹಾಗೂ ಬಾಲ ನ್ಯಾಯ ನಿಯಮಾವಳಿಗಳನ್ನು ಪಾಲಿಸಬೇಕಾಗಿ ಸೂಚಿಸಲಾಗಿದೆ. ಯಾವುದೇ ರೀತಿಯ ಮಾಧ್ಯಮ ಅಥವಾ ಡಿಜಿಟಲ್ ವೇದಿಕೆಯಲ್ಲಿ ಅವರ ಹೆಸರುಗಳು, ಫೋಟೋಗಳು ಅಥವಾ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸುವ ಯಾವುದೇ ಪ್ರಯತ್ನವು ಶಿಕ್ಷಾರ್ಹ ಅಪರಾಧವಾಗಿದೆ.