ಬಂಟ್ವಾಳ, ಜು. 07 (DaijiworldNews/TA): ಬ್ರಿಟಿಷ್ ಕಾಲದ ಪಾಣೆಮಂಗಳೂರು ಉಕ್ಕಿನ ಸೇತುವೆಯ ಸಾಮರ್ಥ್ಯ ಪರೀಕ್ಷೆಯನ್ನು ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯ ಅಧಿಕಾರಿಗಳು ಮಾಡಿದ್ದು, ಇದೀಗ ವರದಿಯನ್ನು ಬಂಟ್ವಾಳ ಪುರಸಭಾ ಇಲಾಖೆಗೆ ನೀಡಿದ್ಧಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಎನ್ ಐಟಿಕೆ ಸಂಸ್ಥೆಯಿಂದ ಪ್ರೊಫೆಸರ್ ಡಾ. ಪಲಿನಿ ಸ್ವಾಮಿ, ವಿಜಯನ್ ಅವರು ಆಗಮಿಸಿ ಪರಿಶೀಲನೆ ನಡೆಸಿದ್ದು, ಇದೀಗ ವರದಿ ನೀಡಿದ್ದಾರೆ. ವರದಿಯಲ್ಲಿ ಹಲವು ವಿಚಾರಗಳನ್ನು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಂತದಲ್ಲಿ ಸೇತುವೆಯ ಒಟ್ಟಾರೆ ಸ್ಥಿತಿಯನ್ನು ವಿಶ್ವಾಸಾರ್ಹವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಅದಾಗ್ಯೂ, ಮುನ್ನೆಚ್ಚರಿಕೆ ಕ್ರಮವಾಗಿ, ತಾತ್ಕಾಲಿಕವಾಗಿ ಲಘು ವಾಹನಗಳ ಸಂಚಾರವನ್ನು ಮಾತ್ರ ಅನುಮತಿಸಲು ಶಿಫಾರಸು ಮಾಡಲಾಗಿದೆ. ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಗತ್ಯ ದುರಸ್ತಿ, ಬಲಪಡಿಸುವಿಕೆ ಅಥವಾ ಬದಲಿ ಕ್ರಮಗಳನ್ನು ನಿರ್ಧರಿಸಲು ಸಮಗ್ರ ತಾಂತ್ರಿಕ ಅಧ್ಯಯನವನ್ನು ಆದಷ್ಟು ಬೇಗ ಕೈಗೊಳ್ಳಬೇಕು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಮಳೆಗಾಲವಾಗಿದ್ದರಿಂದ ಸೇತುವೆಯ ಪಿಲ್ಲರ್ ಹಾಗೂ ಹೆಚ್ಚಿನ ಪರಿಶೀಲನೆ ಅಸಾಧ್ಯ ಎಂದು ಆ ಸಂದರ್ಭದಲ್ಲಿ ತಿಳಿಸಿದ್ದರು. ಸೇತುವೆ ಪ್ರವೇಶದ ಆರಂಭಿಕ ಜಾಗದಲ್ಲಿ ಅಗತ್ಯವಿರುವ ಹಿನ್ನಲೆಯಲ್ಲಿ ಇಲಾಖೆಯ ವತಿಯಿಂದ ಸಣ್ಣಪುಟ್ಟ ಕಾಮಗಾರಿಗಳನ್ನು ನಡೆಸುವ ಬಗ್ಗೆ ಮಾಹಿತಿಯನ್ನು ಸ್ಥಳದಲ್ಲಿಯೇ ತಿಳಿಸಿದ್ದರು. ಇದೀಗ ವರದಿಯಲ್ಲಿ ಕೂಡ ತಿಳಿಸಲಾಗಿದ್ದು, ಇನ್ನೂ ಕೆಲವು ಸಣ್ಣ ಪುಟ್ಟ ಕಾಮಗಾರಿಗಳನ್ನು ನಡೆಸಲು ವರದಿಯಲ್ಲಿ ಸೂಚಿಸಲಾಗಿದೆ. ಪಾಣೆಮಂಗಳೂರು ಹಳೆಯ ಬ್ರಿಟಿಷ್ ಕಾಲದ ಸೇತುವೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್ ಅವರು ಆದೇಶ ಮಾಡಿದ್ದರು.
ಸಾಮರ್ಥ್ಯ ಪರೀಕ್ಷೆ ನಡೆಸಿ ವರದಿ ನೀಡಿದ ಬಳಿಕ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಎಂದು ಅವರ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಈ ಭಾಗದ ಜನರ ಒತ್ತಾಯದ ಮೇರೆಗೆ ಸ್ಥಳೀಯ ಪುರಸಭಾ ಸದಸ್ಯರ ಮನವಿಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಯಥಾಸ್ಥಿತಿಯಲ್ಲಿ ಇರುವಂತೆ ಕೋರಲಾಗಿತ್ತು.ಹಾಗಾಗಿ ವರದಿಗೂ ಮುನ್ನವೇ ಲಘು ವಾಹನಗಳು ನಿರ್ಬಂಧವಿಲ್ಲದೆ ಓಡಾಟ ನಡೆಸುತ್ತಿದ್ದವು. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಎನ್.ಐ.ಟಿ.ಕೆ. ಅಧಿಕಾರಿಗಳು ಭೇಟಿ ನೀಡಿ ಪರೀಕ್ಷೆ ನಡೆಸಿ ವರದಿ ನೀಡಿದ್ದಾರೆ.