ಉಡುಪಿ, ಜು. 07 (DaijiworldNews/AA): ರಾಷ್ಟ್ರೀಯ ಹೆದ್ದಾರಿ 169-ಎ ರಸ್ತೆಯ ದುಃಸ್ಥಿತಿಯನ್ನು ಖಂಡಿಸಿ ಪರ್ಕಳದ ನಾರಾಯಣ ಗುರು ಮಂದಿರದ ಜಂಕ್ಷನ್ ಬಳಿ ಭಾನುವಾರ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.










ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮನೋವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಡಾ. ಪಿ.ವಿ. ಭಂಡಾರಿ, "ಹದಗೆಟ್ಟ ರಸ್ತೆಗಳಿಂದ ಸಾರ್ವಜನಿಕರು ಎದುರಿಸುತ್ತಿರುವ ನಿರಂತರ ತೊಂದರೆ ಸ್ವೀಕಾರಾರ್ಹವಲ್ಲ. ಮಳೆಯಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ರಸ್ತೆಗಳು ವಾಹನ ಸಂಚಾರಕ್ಕೆ ಸಂಪೂರ್ಣ ಅನರ್ಹವಾಗಿವೆ. ಅವುಗಳನ್ನು ಮತ್ತೆ ಸಂಚಾರಕ್ಕೆ ಯೋಗ್ಯವಾಗಿಸಲು ತಕ್ಷಣದ ಕ್ರಮದ ಅಗತ್ಯವಿದೆ" ಎಂದು ಪರ್ಕಳ ಸುತ್ತಮುತ್ತ ರಸ್ತೆಗಳ ಹದಗೆಟ್ಟ ಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
"ಜನಪ್ರತಿನಿಧಿಗಳು ಹೆದ್ದಾರಿ ಯೋಜನೆ ಬಗ್ಗೆ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ದಾರಿತಪ್ಪಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಕಾಮಗಾರಿ ವಿಳಂಬಕ್ಕೆ ಹೈಕೋರ್ಟ್ ಪ್ರಕರಣವನ್ನು ಕಾರಣವಾಗಿ ನೀಡುತ್ತಿದ್ದಾರೆ. ಆದರೆ ನಾವು ಮಾತನಾಡುತ್ತಿರುವ ರಸ್ತೆಯು ಯಾವುದೇ ವ್ಯಾಜ್ಯದ ಭೂಮಿಯ ಭಾಗವಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಸಮಸ್ಯೆಯು ಅಸ್ತಿತ್ವದಲ್ಲಿರುವ ಹಳೆಯ ರಸ್ತೆಯಲ್ಲಿದೆ, ಇದನ್ನು ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ನಿರ್ವಹಿಸುವ ಗುತ್ತಿಗೆದಾರರು ನಿರ್ವಹಿಸಬೇಕು. ದುರದೃಷ್ಟವಶಾತ್, ಯಾವುದೇ ನಿರ್ವಹಣೆ ಮಾಡಿಲ್ಲ. ಇದರಿಂದಾಗಿ ಈ ಪ್ರದೇಶದ ಜನರಿಗೆ ತೀವ್ರ ಅನಾನುಕೂಲವನ್ನು ಉಂಟುಮಾಡಿದೆ" ಎಂದು ತಿಳಿಸಿದರು.
"ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇಂತಹ ನೆಪಗಳನ್ನು ಹೇಳಿ ಜನರ ಕಣ್ಣಿಗೆ ಮಣ್ಣೆರಚಲು ಪ್ರಯತ್ನಿಸುತ್ತಿರುವುದು ಬೇಸರದ ಸಂಗತಿ. ಇಂತಹ ವರ್ತನೆಯನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ. ಈ ಪ್ರತಿಭಟನೆ ರಾಜಕೀಯವಲ್ಲ. ನಾವು ಯಾವುದೇ ನಿರ್ದಿಷ್ಟ ಅಧಿಕಾರಿ ಅಥವಾ ನಾಯಕರನ್ನು ಗುರಿಯಾಗಿಸಿಲ್ಲ. ನಾವು ಕೇವಲ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದೇವೆ. ಅಸ್ತಿತ್ವದಲ್ಲಿರುವ ರಸ್ತೆಯನ್ನು ದುರಸ್ತಿ ಮಾಡಿ ಯಾವುದೇ ವಿಳಂಬವಿಲ್ಲದೆ ಸಾರ್ವಜನಿಕ ಬಳಕೆಗೆ ಯೋಗ್ಯವಾಗುವಂತೆ ಮಾಡುವುದು ನಮ್ಮ ಬೇಡಿಕೆಯಾಗಿದೆ. ಇದು ನಮ್ಮ ಪ್ರತಿಭಟನೆಯ ಮೊದಲ ಹಂತ ಮಾತ್ರ. ಮುಂದಿನ ನಾಲ್ಕು ವಾರಗಳಲ್ಲಿ ಪರ್ಕಳ-ಮಣಿಪಾಲ ರಸ್ತೆಯನ್ನು ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಯೋಗ್ಯವಾಗಿಸದಿದ್ದರೆ, ನಾವು ನಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮತ್ತು ರಸ್ತೆ ತಡೆ ಸೇರಿದಂತೆ ತೀವ್ರ ಕ್ರಮಗಳನ್ನು ಕೈಗೊಳ್ಳುತ್ತೇವೆ. ನಾವು ನಮ್ಮ ಮೂಲಭೂತ ಹಕ್ಕು, ಸುರಕ್ಷಿತ ಮತ್ತು ಸುಲಭವಾಗಿ ತಲುಪಬಹುದಾದ ರಸ್ತೆಗಳ ಹಕ್ಕಿಗಾಗಿ ಹೋರಾಡುತ್ತಿದ್ದೇವೆ. ನಮ್ಮ ಧ್ವನಿ ಕೇಳುವವರೆಗೂ ನಾವು ಈ ಹೋರಾಟವನ್ನು ಮುಂದುವರಿಸುತ್ತೇವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಮುದಾಯ ಮುಖಂಡರಾದ ಅಮೃತ್ ಶೆಣೈ, ಜೈವಿಠಲ್, ಅನ್ಸಾರ್ ಅಹ್ಮದ್, ರಮೇಶ್ ಕಾಂಚನ್, ಡಾ. ಸುಲತಾ ಭಂಡಾರಿ, ಮಂಜುನಾಥ ಉಪಾಧ್ಯಾಯ ಹಾಗೂ ವಿವಿಧ ಸ್ಥಳೀಯ ಸಂಘಟನೆಗಳ ಸದಸ್ಯರು ಮತ್ತು ಪರ್ಕಳ ಹಾಗೂ ಮಂಜುನಾಥ ನಗರದ ನಿವಾಸಿಗಳು ಭಾಗವಹಿಸಿದ್ದರು.