ಮಂಗಳೂರು, ಜು. 07 (DaijiworldNews/AA): ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮೀಣ ಸ್ವಚ್ಛತೆ, ನೈರ್ಮಲ್ಯ ಕಾಪಾಡುವಿಕೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರತೆ ಕಾಯ್ದುಕೊಳ್ಳಲು ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಈ ಎಲ್ಲಾ ಅಂಶಗಳ ಪ್ರಗತಿ ಹಾಗೂ ಸುಸ್ಥಿರತೆಯಲ್ಲಿ ಸಮುದಾಯ ಭಾಗವಹಿಸುವಿಕೆಗೆ ಹಮ್ಮಿಕೊಂಡಿರುವ ಚಟುವಟಿಕೆಗಳ ಕುರಿತು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2025 ಆಯೋಜಿಸಲಾಗುತ್ತಿದೆ.
ಪ್ರಸ್ತುತ 'ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2025' ರ ಸಮೀಕ್ಷೆ ಕಾರ್ಯಕ್ಕೆ ಜೂ.22 ರಿಂದ ಜು.15 ರವರೆಗೆ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಲಕ್ನೋ ಸಂಸ್ಥೆಯನ್ನು ನೇಮಿಸಲಾಗಿದೆ. ಈ ಸಂಸ್ಥೆಯ ಪ್ರತಿನಿಧಿಗಳು ನಿಗದಿತ ದಿನಾಂಕದಂದು ಕೇಂದ್ರ ಸರಕಾರ ನೀಡಿರುವ ಗ್ರಾಮಗಳಿಗೆ ಸರ್ವೇ ಮಾಡಲು ತೆರಳುತ್ತಾರೆ.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಈವರೆಗೆ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ನಿರ್ಮಿಸಿದ ವಿವಿಧ ಘಟಕಗಳು ನಿರಂತರ ಕಾರ್ಯಾಚರಣೆ ಮತ್ತು ಸುಸ್ಥಿರತೆ ಕಾಯ್ದುಕೊಳ್ಳಲು ಅಗತ್ಯ ಕ್ರಮವಹಿಸಬೇಕು. ಗ್ರಾಮ ಪಂಚಾಯಿತಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ, ಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳು ಹಾಗೂ ತರಬೇತಿ ಕಾರ್ಯಕ್ರಮಗಳನ್ನು ನಡೆಸಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಗ್ರಾಮಗಳಲ್ಲಿ ಕೈಗೊಳ್ಳಲಾಗುವ ಕಾರ್ಯಚಟುವಟಿಕೆಗಳ ಮೌಲ್ಯಮಾಪನ, ಮೇಲ್ವಿಚಾರಣೆ ಮತ್ತು ಶ್ರೇಣೀಕರಣದ (Ranking) ಉದ್ದೇಶದಿಂದ ಪ್ರಾರಂಭಿಸಲಾದ 'ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2025' ಅಭಿಯಾನದಲ್ಲಿ ತಪ್ಪದೇ ಭಾಗಿಯಾಗಿ. ಸರ್ವೇಯಲ್ಲಿ ಭಾಗಿಯಾಗಲು ಕೂಡಲೇ ಪ್ಲೇಸ್ಟೋರ್'ನಲ್ಲಿ ಎಸ್ಎಸ್ಜಿ 2025 ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು.
https://play.google.com/store/apps/details?id=com.ssg.abc.ssg
ದಕ್ಷಿಣ ಕನ್ನಡ ಜಿಲ್ಲೆ ಅಗ್ರ ಶ್ರೇಯಾಂಕ (Rank) ಗಳಿಸಲು ನಿಮ್ಮ ಪ್ರತಿಕ್ರಿಯೆ (Feedback) ಅತೀ ಅಗತ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.