ಮಂಗಳೂರು, ಜು. 07 (DaijiworldNews/AA): ಪ್ರೇಯಸಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿ, ಬಳಿಕ ಆಕೆಯ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಫರಂಗಿಪೇಟೆಯಲ್ಲಿ ಸೋಮವಾರ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಫರಂಗಿಪೇಟೆ ನಿವಾಸಿ ದಿವ್ಯಾ ಅಲಿಯಾಸ್ ದೀಕ್ಷಿತಾ (26) ಎಂಬಾಕೆ ಹಾಗೂ ಕೋಡ್ಮನ್ ಗ್ರಾಮ ನಿವಾಸಿ ಸುಧೀರ್ (30) ಎಂಬಾತನು ಸುಮಾರು 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕಳೆದ ಕೆಲ ತಿಂಗಳುಗಳಿಂದ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿರುತ್ತದೆ.
ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿದ್ದರೂ ಆರೋಪಿ ಸುಧೀರ್ ಫೋನ್ ಮಾಡುವುದು, ಹಿಂಬಾಲಿಸುತ್ತಿದ್ದ ಎಂದು ತಿಳಿದುಬಂದಿದೆ. ಜುಲೈ 7 ರ ಬೆಳಗ್ಗೆ, ಆರೋಪಿ ಸುಧೀರ್ ಫರಂಗಿಪೇಟೆಯ ಸುಜೀರ್ ಮಲ್ಲಿ ಬಳಿ ದಿವ್ಯಾಳನ್ನು ಭೇಟಿಯಾಗಿ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಸುಧೀರ್ ತಾನು ತಂದಿದ್ದ ಚಾಕುವಿನಿಂದ ದಿವ್ಯಾಳಿಗೆ ಇರಿದಿದ್ದಾನೆ.
ದಿವ್ಯಾ ತಪ್ಪಿಸಿಕೊಂಡು ಓಡುವಾಗ ಕುಸಿದು ಬಿದ್ದಿದ್ದಾಳೆ. ಅವಳು ಮೃತಪಟ್ಟಿದ್ದಾಳೆಂದು ಭಾವಿಸಿದ ಸುಧೀರ್, ನಂತರ ಅವಳ ಬಾಡಿಗೆ ಮನೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಈ ವೇಳೆ ಮನೆಮಂದಿ ದಿವ್ಯಾಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಹೇಳಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿ ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು.