ಉಡುಪಿ, ಜು. 07 (DaijiworldNews/AA): ದಾಯ್ಜಿವರ್ಲ್ಡ್ ಉಡುಪಿ, ಕಿಶೂ ಎಂಟರ್ಪ್ರೈಸಸ್ ಅವರ ವತಿಯಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಬಹು ನಿರೀಕ್ಷಿತ ಭಾಷಣ ಸ್ಪರ್ಧೆ 'ಅಭಿವ್ಯಕ್ತ'ದ ಆಡಿಷನ್ ಸುತ್ತು ಜುಲೈ 6ರಂದು ಭಾನುವಾರ ಉಡುಪಿಯ ಸೈಲಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆಯಿತು.










































ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ರವಿರಾಜ ಎನ್ ಎಸ್, ಸೀನಿಯರ್ ಡೈರೆಕ್ಟರ್- ರಿಸರ್ಚ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಜೆಸಿಂತಾ ಸಲ್ದಾನ್ಹಾ, ಪ್ರಾಂಶುಪಾಲರು, ಸೈಲಸ್ ಇಂಟರ್ನ್ಯಾಷನಲ್ ಶಾಲೆ, ರವೀಂದ್ರ ಶೆಟ್ಟಿ ಮಾಲಕರು, ಗಿರಿಜಾ ಹೆಲ್ತ್ಕೇರ್ ಅಂಡ್ ಸರ್ಜಿಕಲ್ಸ್ ಉಪಸ್ಥಿತರಿದ್ದರು. ಈ ಸಂದರ್ಭ ದಾಯ್ಜಿವರ್ಲ್ಡ್ ಉಡುಪಿಯ ನಿರ್ದೇಶಕ ಕಿಶೂ ಬಾರ್ಕೂರ್, ವ್ಯವಸ್ಥಾಪಕರಾದ ಕೆವಿನ್ ರೋಡ್ರಿಗಸ್, ಸ್ಪರ್ಧೆಯ ತೀರ್ಪುಗಾರರಾದ ಆಲ್ವಿನ್ ದಾಂತಿ ಮತ್ತು ಶ್ರೇಯಸ್ ಕೋಟ್ಯಾನ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು "ಅಭಿವ್ಯಕ್ತ" ಅಕ್ಷರಗಳನ್ನು ಜೋಡಿಸುವ ಮೂಲಕ ಸಮಾರಂಭವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೀಡಲಾಗುವ ಪದಕಗಳನ್ನು ರವೀಂದ್ರ ಶೆಟ್ಟಿ ಅನಾವರಣಗೊಳಿಸಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಜೆಸಿಂತಾ ಸಲ್ದಾನ್ಹಾ ಅವರು, "ಈ ದಿನ ನಾವು ಭಾಷಣ ಕಲೆ, ಮಾತಿನ ಶಕ್ತಿ ಮತ್ತು ಯುವ ಮನಸ್ಸುಗಳ ಚೈತನ್ಯವನ್ನು ಹಬ್ಬವಾಗಿ ಆಚರಿಸುತ್ತಿದ್ದೇವೆ. ಭಾಷಣ ಕಲೆ ಕೇವಲ ಮಾತುಕತೆಗೆ ಸೀಮಿತವಲ್ಲ; ಅದು ಆಲೋಚನೆಗಳನ್ನು ವ್ಯಕ್ತಪಡಿಸುವುದು, ಪ್ರೇರಣೆ ನೀಡುವುದು ಮತ್ತು ಇತರರನ್ನು ಸ್ಪಂದಿಸಲು ಪ್ರೇರೇಪಿಸುವುದಾಗಿದೆ. ಈ ವೇದಿಕೆ ನಿಮ್ಮ ರಂಗಭೂಮಿ, ನಿಮ್ಮ ಧ್ವನಿ. ವಿಶ್ವಾಸದಿಂದ, ಉತ್ಸಾಹದಿಂದ ಮತ್ತು ಪ್ರಾಮಾಣಿಕತೆಯಿಂದ ಮಾತಾಡಿ" ಎಂದರು.
ಆಲ್ವಿನ್ ದಾಂತಿ, ಮಾತನಾಡಿ, "ಮಾತು ಅತ್ಯಂತ ಪ್ರಭಾವಶಾಲಿ. ಇಂದು ಮಾತಿನ ಮೂಲಕವೇ ನೀವು ಜಗತ್ತನ್ನು ಗೆಲ್ಲಬಹುದು. ರಾಜಕಾರಣ, ಧರ್ಮ, ಸಮಾಜ ಎಲ್ಲ ರಂಗದಲ್ಲಿಯೂ ಮಾತಿಗೆ ಮಹತ್ವವಿದೆ. ಚಾಣಕ್ಯ ಚಾಲೆಂಜ್ ಸೀಸನ್ 3 ಯಶಸ್ವಿಯಾಗಿ ಮುಗಿಸಿ, ಈಗ ಅಭಿವ್ಯಕ್ತ ದತ್ತ ಹೆಜ್ಜೆ ಇಡುತ್ತಿದ್ದೇವೆ".
ಆಡಿಷನ್ ಸುತ್ತಿನ ತೀರ್ಪುಗಾರರಾದ ಶ್ರೇಯಸ್ ಕೋಟ್ಯಾನ್ ಮಾತನಾಡಿ, "ಈ ಸಮಾಜದಲ್ಲಿ ವ್ಯಕ್ತಪಡಿಸುವ ಅಥವಾ ಸಂವಹನ ಮಾಡುವ ಗುಣ ಬಹುಮುಖ್ಯ. ಮಾತು ಎಂಬುವುದು ಬಹುಮುಖ್ಯ ಭಾಗ. ವಿದ್ಯಾರ್ಥಿಗಳಲ್ಲಿ ಭಾಷಣ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ" ಎಂದರು.
ರವೀಂದ್ರ ಶೆಟ್ಟಿ ಮಾತನಾಡುತ್ತಾ ದಾಯ್ಜಿವಲ್ಡ್ ಮತ್ತು ಕಿಶೂ ಎಂಟರ್ಪ್ರೈಸಸ್ ಅವರ ಸಾಮಾಜಿಕ ಬದ್ಧತೆಯನ್ನು ಶ್ಲಾಘಿಸಿದರು. "ವಾಣಿಜ್ಯ ಪ್ರಯೋಜನವಿಲ್ಲದೆಯೇ ಈ ಕಾರ್ಯಕ್ರಮವನ್ನು CSR ಅಡಿಯಲ್ಲಿನ ಒಂದು ಸಮಾಜಮುಖಿ ಸೇವೆಯಾಗಿ ನಡೆಸುತ್ತಿದ್ದಾರೆ" ಎಂದರು.
ಡಾ. ರವಿರಾಜ ಎನ್ ಎಸ್, ತಮ್ಮ ಭಾಷಣದಲ್ಲಿ: "ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಆಹ್ವಾನ ದೊರೆತಾಗ ಖುಷಿಯಾಯಿತು. ಇಂದು ಮಕ್ಕಳು ಡಿಜಿಟಲ್ ಜಗತ್ತಿನಲ್ಲಿ ಮುಳುಗಿಹೋಗಿದ್ದಾರೆ. ಒಂದನೇ ಮಹಡಿಯಲ್ಲಿ ಇರುವ ಮಕ್ಕಳಿಗೆ ಪೋನ್ ಮಾಡಿ ಮಾತನಾಡುವ ಸ್ಥಿತಿ ಮನೆಗಳಲ್ಲಿ ಇದೆ. ಈ ಕಾರ್ಯಕ್ರಮವು ಮಕ್ಕಳ ಭಾಷಣ ಸಾಮರ್ಥ್ಯವನ್ನು, ಜ್ಞಾನವನ್ನು ಮತ್ತು ನೆಟ್ವರ್ಕ್ಗಳನ್ನು ಹೆಚ್ಚಿಸುವ ಮೂಲಕ ಭವಿಷ್ಯ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ".
ಡಾ. ರವಿರಾಜ ಎನ್ ಎಸ್, ಮೈಕ್ ಅನ್ನು ತೀರ್ಪುಗಾರರಿಗೆ ಹಸ್ತಾಂತರಿಸುವ ಮೂಲಕ ಆಡಿಷನ್ ಸುತ್ತಿಗೆ ಚಾಲನೆ ನೀಡಿದರು. ಆಡಿಷನ್ ಸುತ್ತಿಗೆ ಅಲ್ವಿನ್ ದಾಂತಿ ಪೆರ್ನಾಲ್, ಶ್ರೇಯಸ್ ಕೋಟ್ಯಾನ್ ಮತ್ತು ರಾಜೇಂದ್ರ ಭಟ್ ಕಾರ್ಕಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳ ೬೦ಕ್ಕೂ ಹೆಚ್ಚು ಶಾಲೆಗಳ 100 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.
ಸ್ನೇಹ ವಿನೋದ್ ಪೈ ಕಾರ್ಯಕ್ರಮ ನಿರೂಪಿಸಿದರು ಮತ್ತು ಪ್ರಗತಿ ಪುತ್ರನ್ ಸ್ವಾಗತಿಸಿದರು.
ಆಡಿಷನ್ ಸುತ್ತುಗಳು ಶೀಘ್ರದಲ್ಲೇ ದಾಯ್ಜಿವರ್ಲ್ಡ್ 24x7 ಚಾನೆಲ್ನಲ್ಲಿ ಪ್ರಸಾರವಾಗಲಿವೆ. ಜೊತೆಗೆ ದಾಯ್ಜಿವರ್ಲ್ಡ್ ಉಡುಪಿ ಯೂಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿರಲಿದೆ. ಈ ಸ್ಪರ್ಧೆ ವಿವಿಧ ಹಂತಗಳನ್ನು ಒಳಗೊಂಡಿದ್ದು, ಅಂತಿಮ ಹಂತಕ್ಕೆ ಟಾಪ್ 6 ಸ್ಪರ್ಧಿಗಳು ಪ್ರವೇಶಿಸಲಿದ್ದಾರೆ.