ಉಡುಪಿ, ಜು. 11 (DaijiworldNews/AA): ಉಡುಪಿ ಜಿಲ್ಲೆಯ ಆಯ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗಾಗಿ 30 ದಿನಗಳ ಉಚಿತ "ನವಚೇತನ ಶಿಬಿರ"ವನ್ನು ಪರ್ಕಳ ಸಮೀಪದಲ್ಲಿರುವ ಪರೀಕದ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ 'ಸೌಖ್ಯವನ' ದಲ್ಲಿ ಆಯೋಜಿಸಲಾಗಿದೆ.





ಜುಲೈ 1ರಂದು ಪ್ರಾರಂಭವಾದ ಈ ಶಿಬಿರಕ್ಕೆ ಉಡುಪಿ ಜಿಲ್ಲೆಯ ಒಟ್ಟು 71 ಪೊಲೀಸರನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ 62 ಮಂದಿ ಪುರುಷರು ಹಾಗೂ 9 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿಗಳಿದ್ದಾರೆ. ಇನ್ನು ಶಿಬಿರದಲ್ಲಿ ಒಬ್ಬ ಎಸ್ಐ, 12 ಮಂದಿ ಎಎಎಸ್ಐ, 35 ಮಂದಿ ಹೆಡ್ ಕಾನ್ಸ್ಟೇಬಲ್ ಗಳು ಹಾಗೂ 23 ಮಂದಿ ಪೊಲೀಸ್ ಕಾನ್ಸ್ಟೇಬಲ್ಗಳಿದ್ದಾರೆ.
ಶಿಬಿರದಲ್ಲಿ ಪ್ರತಿದಿನ ವಿವಿಧ ಆರೋಗ್ಯ ಮತ್ತು ಫಿಟ್ನೆಸ್ ಸೆಷನ್ಗಳನ್ನು ಆಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ ಸೌಖ್ಯವನದ ಪ್ರಮಾಣೀಕೃತ ತರಬೇತುದಾರರಿಂದ ಒಂದು ಗಂಟೆಯ ಡೈನಾಮಿಕ್ ಯೋಗದೊಂದಿಗೆ ದಿನ ಪ್ರಾರಂಭವಾಗುತ್ತದೆ. ಇದರ ನಂತರ ಪೊಲೀಸ್ ತರಬೇತಿ ಶಾಲೆಯ ತರಬೇತುದಾರರಿಂದ ಒಂದು ಗಂಟೆಯ ದೈಹಿಕ ತರಬೇತಿ ಇರುತ್ತದೆ.
ದೈಹಿಕ ಚಟುವಟಿಕೆಗಳ ಜೊತೆಗೆ ಶಿಬಿರದಲ್ಲಿ ಎಲ್ಲಾ ಶಿಬಿರಾರ್ಥಿಗಳಿಗೆ ಸಮಗ್ರ ಯೋಗಕ್ಷೇಮದ ಬಗ್ಗೆ ಅರಿವು ಮೂಡಿಸಲು ಯೋಗ, ಪಿ.ಟಿ., ಝುಂಬಾ, ಜಿಮ್ ಹಾಗೂ ಕರಾಟೆಯನ್ನು ಆಯಾ ಕ್ಷೇತ್ರದ ತಜ್ಞರಿಂದ ಕಲಿಸಿ ಅಭ್ಯಸಿಸಲಾಗುತ್ತದೆ. ಇನ್ನು ದೈಹಿಕ ಚಟುವಟಿಕೆಗಳ ಜೊತೆಗೆ, ಸಮಗ್ರ ಯೋಗಕ್ಷೇಮದ ಬಗ್ಗೆ ಅರಿವು ಮೂಡಿಸಲು ವಿವಿಧ ಕ್ಷೇತ್ರಗಳ ವಿಷಯ ತಜ್ಞರಿಂದ ಆರೋಗ್ಯ ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ಭಾಗವಹಿಸುವವರು ಪ್ರತಿದಿನ ಸಂಜೆ ಒಂದು ಗಂಟೆ ವಾಕಿಂಗ್ ಮಾಡಿಸಲಾಗುತ್ತದೆ. ಅಗತ್ಯವಿರುವ ಕಡೆಗಳಲ್ಲಿ ಫಿಸಿಯೋಥೆರಪಿ ಮತ್ತು ಸ್ಟೀಮ್ ಬಾತ್ ಚಿಕಿತ್ಸೆಗಳನ್ನು ಸಹ ನೀಡಲಾಗುತ್ತಿದೆ. ಮುಖ್ಯವಾಗಿ, ಶಿಬಿರಾರ್ಥಿಗಳಿಗೆ 'ಪಥ್ಯಾಹಾರ'ವನ್ನೇ ನೀಡಲಾಗುತ್ತದೆ.
ಯುವ ಸಬಲೀಕರಣ ಇಲಾಖೆಯ ಉಮೇಶ್ ಮಟ್ಟುವರಿಂದ ಫಿಟ್ನೆಸ್ ತರಬೇತಿ ನೀಡಲಾಗುತ್ತಿದ್ದು, ಸ್ವಾಗ್ ಡ್ಯಾನ್ಸ್ ಅಕಾಡೆಮಿಯ ಸಿಂಚನಾ ಪ್ರಕಾಶ್ ಝುಂಬಾ ಸೆಷನ್ಗಳನ್ನು ನಡೆಸುತ್ತಿದ್ದಾರೆ. ಶಿಬಿರದ ಮೊದಲ 10 ದಿನಗಳು ಯಶಸ್ವಿಯಾಗಿ ಪೂರೈಸಿದ್ದು, ಇನ್ನೂ 20 ದಿನಗಳ ತರಬೇತಿ ಬಾಕಿ ಇದೆ.