ಸುಳ್ಯ, ಜು. 16(DaijiworldNews/AK): ಪೆರಾಜೆ ಗ್ರಾಮದ ಖಾಸಗಿ ತೋಟದಲ್ಲಿ ಬೀಡುಬಿಟ್ಟ ಒಂಟಿ ಕಾಡನೆಯನ್ನು ಕೊಡಗಿನ ಪೆರಾಜೆ ಗ್ರಾಮದಿಂದ ಜು.15ರಂದು ದ.ಕ. ಜಿಲ್ಲೆಯ ತೊಡಿಕಾನ ಗ್ರಾಮಕ್ಕೆ ಅರಣ್ಯ ಇಲಾಖೆಯ ಕಾರ್ಯಾಚರಣೆ ಮೂಲಕ ಅಟ್ಟಿಸಲಾಗಿದ್ದು, ಆ ಕಾಡಾನೆ ತೊಡಿಕಾನ ಗ್ರಾಮದಲ್ಲಿ ತಡರಾತ್ರಿ ಕಾಣಿಸಿಕೊಂಡು ಗ್ರಾಮದ ಕೆಲವು ಜನರ ತೋಟಗಳಿಗೆ ದಾಳಿ ಮಾಡಿದೆ.


ಅಮಚೂರು ಬೆಟ್ಟದಪುರ ಚಿಪ್ಪುರುಗುಡ್ಡೆಗೆ ಅಟ್ಟಿಸಲಾದ ಕಾಡಾನೆ ಬಳಿಕ ಕುಂಟುಕಾಡು ಭಾಗದಲ್ಲಿ ಕಾಣಿಸಿಕೊಂಡಿದೆ. ಅಲ್ಲಿಂದ ಕಾಡಾನೆಯನ್ನು ಸ್ಥಳೀಯರು ಓಡಿಸಿದ್ದು ಬಳಿಕ ಅದು ನಾಗನಮೂಲೆ, ಚಿಟ್ಟನ್ನೂರು,ಎಡ್ಚಾರ್ ಭಾಗದ ರೈತರ ತೋಟಗಳಿಗೆ ನುಗ್ಗಿ ಬೆಳೆನಾಶ ಮಾಡಿವೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪೆರಾಜೆಯಲ್ಲಿದ್ದ ಕಾಡಾನೆಯನ್ನು ಬಂಗಾರಕೋಡಿ ಮಾರ್ಗವಾಗಿ ಭಾಗಮಂಡಲ ಮೀಸಲು ಅರಣ್ಯಕ್ಕೆ ಓಡಿಸಲು ಅರಣ್ಯ ಇಲಾಖೆ ನಿರ್ಧಾರ ಮಾಡಿತು.ಆದರೆ ಆನೆ ತಾನು ಓಡಿದ ದಾರಿ ಬದಲಾದ ಕಾರಣ ಈ ನಿರ್ಧಾರದಂತೆ ಆನೆ ಓಡಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡದ ಮೂಲಕ ಸ್ಥಳೀಯರ ಸಹಕಾರದೊಂದಿಗೆ ಅರಣ್ಯ ಇಲಾಖೆ ಆನೆ ಓಡಿಸುವ ಕಾರ್ಯ ಕೈಗೆತ್ತಿಕೊಂಡಿತ್ತು. ಇನ್ನೊಂದು ಆನೆ ಹಿಂಡು ತೊಡಿಕಾನ ಗ್ರಾಮದ ಈಶ್ವರ ಭಟ್, ಗೌರಿಶಂಕರ ಭಟ್ ಅವರ ತೋಟಗಳಿಗೆ ನುಗ್ಗಿ ಅಡಿಕೆ, ಬಾಳೆ,ತೆಂಗು ಇತರ ಬೆಳೆಗಳನ್ನು ನಾಶಪಡಿಸಿವೆ.