ಉಡುಪಿ, ಜು. 16 (DaijiworldNews/AA): ಮೀನುಗಾರಿಕೆಗೆಂದು ನಾಡದೋಣಿಯೊಂದಿಗೆ ಸಮುದ್ರಕ್ಕೆ ತೆರಳಿದ್ದ ಮೀನುಗಾರರು ನೀರುಪಾಲಾದ ಘಟನೆಗೆ ಸಂಬಂಧಿಸಿದಂತೆ ಓರ್ವನ ಮೃತದೇಹ ಬುಧವಾರ ಬೆಳಗಿನ ಜಾವ ಪತ್ತೆಯಾಗಿದೆ.


ನಾಡದೋಣಿಯೊಂದಿಗೆ ಮೀನುಗಾರಿಕೆಗೆಂದು ತೆರಳಿದ್ದ ವೇಳೆ ಗಂಗೊಳ್ಳಿಯ ಹಳೆ ಅಳಿವೆ ಪ್ರದೇಶದಲ್ಲಿ ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆಯಾಗಿದ್ದರು. ಇದೀಗ ನಾಪತ್ತೆಯಾಗಿದ್ದ ಗಂಗೊಳ್ಳಿ ಬೇಲಿಕೆರಿ ನಿವಾಸಿ ಲೋಹಿತ್ ಖಾರ್ವಿ (39) ಅವರ ಮೃತದೇಹ ಪತ್ತೆಯಾಗಿದೆ. ಅವರ ಮೃತದೇಹವನ್ನು ಬೆಳಗಿನ ಜಾವ 4:30ರ ವೇಳೆಗೆ ಮುಳುಗು ತಜ್ಞ ದಿನೇಶ್ ಖಾರ್ವಿ ಅವರ ತಂಡ ಕೋಡಿ ಕಡಲ ತೀರದಲ್ಲಿ ಪತ್ತೆ ಮಾಡಿದೆ.
ಜುಲೈ 15 ರ ಬೆಳಿಗ್ಗೆ ಗಂಗೊಳ್ಳಿಯ ಹಳೆಯ ಅಳಿವೆ ಪ್ರದೇಶದ ಬಳಿ ಈ ದುರಂತ ಸಂಭವಿಸಿದ್ದು, ನಾಲ್ವರು ಮೀನುಗಾರರಿದ್ದ ದೋಣಿ ತೂಫಾನ್ಗೆ ಸಿಲುಕಿ ಮಗುಚಿ ಬಿದ್ದಿತ್ತು. ಅವರಲ್ಲಿ, ಮಲ್ಯಾರಬೆಟ್ಟಿನ ಸಂತೋಷ ಖಾರ್ವಿ ಅವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.
ನಾಪತ್ತೆಯಾಗಿರುವ ಉಳಿದ ಇಬ್ಬರು ಮೀನುಗಾರರಾದ ಗಂಗೊಳ್ಳಿ ನಿವಾಸಿ ಸುರೇಶ್ ಖಾರ್ವಿ (48) ಮತ್ತು ಮಲ್ಯಾರುಬೆಟ್ಟಿನ ಜಗನ್ನಾಥ ಖಾರ್ವಿ (50) ಗಾಗಿ ಶೋಧ ಕಾರ್ಯ ಮುಂದುವರಿದಿದೆ. ನಿರಂತರ ಮಳೆ, ಬಿರುಗಾಳಿ ಮತ್ತು ಸಮುದ್ರದಲ್ಲಿನ ಅಲೆಗಳು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿವೆ.
ಜುಲೈ 15ರಂದು 8 - 10 ದೋಣಿಗಳು ಮೀನುಗಾರಿಕೆಗೆಂದು ತೆರಳಿತ್ತು. ದುರಂತಕ್ಕೀಡಾದ ದೋಣಿಯೂ ಬೆಳಗ್ಗೆ 6 ಗಂಟೆಗೆ ಮೀನುಗಾರಿಕೆಗೆ ಹೊರಟಿತ್ತು. ಆದರೆ ಸಮುದ್ರದಲ್ಲಿ ಭಾರೀ ತೂಫಾನ್ ಹಾಗೂ ಗಾಳಿಯ ಒತ್ತಡ ಹೆಚ್ಚಿದ್ದ ಕಾರಣ ಮೀನುಗಾರಿಕೆ ನಡೆಸದೆ ವಾಪಾಸ್ಸಾಗುತ್ತಿದ್ದರು. ಅವರು ಗಂಗೊಳ್ಳಿ ಹಳೆ ಅಳಿವೆ ಪ್ರದೇಶ ತಲುಪುತ್ತಿದ್ದಂತೆ, ಅವರ ದೋಣಿ ತೂಫಾನ್ ಗೆ ಸಿಲುಕಿ ಮಗುಚಿದೆ.
ಈ ವೇಳೆ ಒಬ್ಬರು ದೋಣಿಯಿಂದ ಬಿದ್ದಾಗ ಅವರನ್ನು ರಕ್ಷಿಸಲು ಇನ್ನೊಬ್ಬರು ನೀರಿಗೆ ಹಾರಿದರು. ರಕ್ಷಣೆ ಸಾಧ್ಯವಾಗದೆ ಇದ್ದಾಗ ಮತ್ತೊಬ್ಬರು ನೀರಿಗೆ ಧುಮುಕಿದ್ದಾರೆ. ದುರದೃಷ್ಟವಶಾತ್, ಮೂವರೂ ಕೊಚ್ಚಿ ಹೋಗಿದ್ದಾರೆ. ಸಂತೋಷ್ ಖಾರ್ವಿ ಅವರನ್ನು ಮಾತ್ರ ರಕ್ಷಿಸಲಾಯಿತು. ಗಾಳಿಯ ರಭಸದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಯಿತು.