ಪುತ್ತೂರು, ಜು. 16 (DaijiworldNews/AA): ನವೆಂಬರ್ ತಿಂಗಳೊಳಗೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡ್ತಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.



ಸುಳ್ಯದ ಕುಂಜಾಡಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದೇವರಾಜು ಅರಸು ಅವರು ಅತೀ ಹೆಚ್ಚು ದಿನಗಳ ಮುಖ್ಯಮಂತ್ರಿಯಾಗಿದ್ದರು. ಅದಕ್ಕಿಂತ ಒಂದು ದಿನ ಹೆಚ್ಚು ಮುಖ್ಯಮಂತ್ರಿ ಆದ ಮೇಲೆ ನಾನು ಸೀಟು ಬಿಟ್ಟು ಕೊಡುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೈಕಮಾಂಡ್ ಮುಂದೆ ಒಂದು ಒಪ್ಪಂದ ಮಾಡಿಕೊಂಡಿದ್ದರು. ಡಿಕೆಶಿ-ಸಿದ್ದರಾಮಯ್ಯ ಅವರು ಅಧಿಕಾರ 50-50 ಮಾಡಿಕೊಂಡಿದ್ದರು ಎಂದು ನಾನು ಸಂಡೂರಿನಲ್ಲಿ ಉಪಚುನಾವಣೆ ಸಂದರ್ಭ ಹೇಳಿದ್ದೆ. ಅದರ ಮುಂದುವರಿದ ಭಾಗವಾಗಿ ಡಿಕೆಶಿ ಈಗಾಗಲೇ ಬುನಾದಿ ಹಾಕೋದು ಶುರು ಮಾಡಿದ್ದಾರೆ ಎಂದು ತಿಳಿಸಿದರು.
ದೇವರಾಜು ಅರಸು ಅವರಕ್ಕಿಂತ ಒಂದು ದಿನ ಹೆಚ್ಚು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಮಾಡ್ತಾರೆ. ನನಗೆ ಮಾಹಿತಿ ತಿಳಿದ ಪ್ರಕಾರ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡ್ತಾರೆ. ಬಳಿಕ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟು ಕೊಡುತ್ತಾರೆ. ಇಲ್ಲದಿದ್ದಲ್ಲಿ ಬಲವಂತವಾಗಿ ಆದ್ರೂ ಕುರ್ಚಿಯನ್ನ ಎಲ್ಕೊಂಡು ಅದರಲ್ಲಿ ಕೂತ್ಕೊಳ್ಳುತ್ತಾರೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ಅಧಿಕಾರ ಪಡೀಲೇಬೇಕು ಅನ್ನೋ ಆತುರದಲ್ಲಿ ಡಿಕೆಶಿ ಇದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಮತ್ತೆ ದೊಡ್ಡ ಮಟ್ಟದ ಗೆಲುವು ಕಾಣಲಿದೆ. ಪಕ್ಷದ ತೀರ್ಮಾನದಂತೆ ಮುಂದಿನ ಬಾರಿ ನಾವೆಲ್ಲ ಒಗ್ಗಟ್ಟಾಗಿ ಬಿಜೆಪಿಯನ್ನ ಅಧಿಕಾರಕ್ಕೆ ತರುತ್ತೇವೆ. ಬಿಜೆಪಿ ಪಕ್ಷದಲ್ಲಿರುವ ಬಣ ರಾಜಕೀಯದ ಬಗ್ಗೆ ವರಿಷ್ಠರು ತೀರ್ಮಾನಿಸುತ್ತಾರೆ. ಬಿಜೆಪಿ ಶಿಸ್ತಿನ ಪಕ್ಷ, ಪಕ್ಷ ಸಂಘಟನೆ ಬಗ್ಗೆ ಹೈಕಮಾಂಡ್ ನಿರ್ದೇಶನ ನೀಡುತ್ತೆ ಎಂದರು.
ಗಾಲಿ ಜನಾರ್ದನ ರೆಡ್ಡಿ ಅವರು ದ.ಕ. ಜಿಲ್ಲೆಯ ಕಡಬ ತಾಲೂಕಿನ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಬುಧವಾರ ಭೇಟಿ ನೀಡಿದರು.
ಇನ್ನು ಕಳೆದ ಮೇ 13ರಂದು ದೈವಸ್ಥಾನದ ಬ್ರಹಕಲಶೋತ್ಸವಕ್ಕೆ ಜನಾರ್ಧನ ರೆಡ್ಡಿ ಆಗಮಿಸಬೇಕಿತ್ತು. ಆದರೆ ಆಂಧ್ರಪ್ರದೇಶದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೇ 6ರಂದು ಮತ್ತೆ ಜೈಲುಸೇರಿದ್ದರು. ಹೀಗಾಗಿ ಅವರು ದೈವಸ್ಥಾನದ ಬ್ರಹ್ಮಕಲಶೋತ್ಸವ ಆಗಮಿಸಲು ಸಾಧ್ಯವಾಗಿರಲಿಲ್ಲ.
ಹಾಗಾಗಿ ಮೇ 13ರಂದು ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ದೈವದ ಬಳಿ ಜನಾರ್ದನ ರೆಡ್ಡಿ ಆಪ್ತರು ಜೈಲಿನಿಂದ ಬಿಡುಗಡೆಗೆ ಮೊರೆ ಇಟ್ಟಿದ್ದರು. ಇಂದಿನಿಂದ 1 ತಿಂಗಳ ಒಳಗಡೆ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂದು ಗ್ರಾಮದ ದೈವ ಕೆಡೆಂಜೋಡಿತ್ತಾಯಿ ದೈವ ರೆಡ್ಡಿಗೆ ಅಭಯ ನೀಡಿತ್ತು. ದೈವದ ಅಭಯದಂತೆ ಒಂದು ತಿಂಗಳ ಒಳಗೆ ಗಾಲಿ ಜನಾರ್ದನ ರೆಡ್ಡಿ ಅವರು ಬಿಡುಗಡೆಯಾಗಿದ್ದರು.
ಈ ಹಿನ್ನೆಲೆ ಇಂದು ಸವಣೂರಿನಲ್ಲಿರುವ ಇರುವೆರ್ ಉಳ್ಳಾಕುಲು ಮತ್ತು ಕೆಡೆಂಜೋಡಿತ್ತಾಯಿ ಆರೇಲ್ತಡಿ ದೈವಸ್ಥಾನಕ್ಕೆ ಜನಾರ್ದನ ರೆಡ್ಡಿ ಭೇಟಿ ನೀಡಿದ್ದಾರೆ. ಬಿಡುಗಡೆಯ ಒಂದುವರೆ ತಿಂಗಳ ಬಳಿಕ ದೈವಸ್ಥಾನಕ್ಕೆ ಭೇಟಿ ನೀಡಿ ತಂಬಿಲ ಸೇವೆ ನೀಡಿದ್ದಾರೆ.
ಜನಾರ್ದನ ರೆಡ್ಡಿಗೆ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಸಾಥ್ ನೀಡಿದರು.