ಮಂಗಳೂರು, ಜು. 16 (DaijiworldNews/AA): ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾವೂರು ಠಾಣಾ ಪೊಲೀಸ್ ಕಾನ್ಸ್ ಟೇಬಲ್ ಹಾಗೂ ಸಂತ್ರಸ್ತೆಯ ಪತಿಯನ್ನು ಬುಧವಾರ ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

ಕಾವೂರು ಠಾಣಾ ಪೊಲೀಸ್ ಕಾನ್ಸ್ ಟೇಬಲ್ ಆಗಿದ್ದ ಚಂದ್ರ ನಾಯಕ್ ಹಾಗೂ ಆತನಿಗೆ ಸಹಕರಿಸಿದ ಆರೋಪದ ಮೇರೆಗೆ ಸಂತ್ರಸ್ತೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಸಂತ್ರಸ್ತ ಮಹಿಳೆಯೊರ್ವರು ಜುಲೈ 15ರಂದು ತನ್ನ ಮೇಲೆ ಅತ್ಯಾಚಾರವಾಗಿರುವ ಬಗ್ಗೆ ಲಿಖಿತ ದೂರು ನೀಡಿರುತ್ತಾರೆ. ತನ್ನ ಮೇಲೆ ಅತ್ಯಾಚಾರ ಎಸಗುವುದನ್ನು ತನ್ನ ಪತಿ ವಿಡಿಯೋ ಮಾಡಿ ಬೆದರಿಸುತ್ತಿದ್ದಾನೆ. ಈ ಬಗ್ಗೆ ಸಂತ್ರಸ್ತ ಮಹಿಳೆಯು ತನಗೆ ಪರಿಚಯವಿರುವ ಕಾವೂರು ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಚಂದ್ರ ನಾಯಕ್ ನಿಗೆ ತಿಳಿಸಿದಾಗ, ಚಂದ್ರನಾಯಕ್ ನು ಸಂತ್ರಸ್ತೆಯ ಮನೆಗೆ ಹೋಗಿ ಆಕೆಯ ಪತಿಯ ಮೊಬೈಲ್ನಲ್ಲಿದ್ದ ಪೋಟೋ ಮತ್ತು ವಿಡಿಯೋವನ್ನು ಅಳಿಸಿರುತ್ತಾನೆ.
ನಂತರ ಸಂತ್ರಸ್ತೆಯ ಗಂಡನ ಪ್ರೇರಣೆಯಂತೆ ಚಂದ್ರನಾಯಕ್ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿರುತ್ತಾನೆ. ಇದೀಗ ಸಂತ್ರಸ್ತೆಯ ದೂರಿನ ಹಿನ್ನಲೆಯಲ್ಲಿ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತ ಮಹಿಳೆಯ ಗಂಡ ಮತ್ತು ಕಾವೂರು ಠಾಣಾ ಪೊಲೀಸ್ ಕಾನ್ಸ್ ಟೇಬಲ್ ಚಂದ್ರನಾಯಕ್ ನನ್ನು ದಸ್ತಗಿರಿ ಮಾಡಲಾಗಿರುತ್ತದೆ. ಪ್ರಕರಣದ ತನಿಖೆ ಮುಂದುವರೆದಿದೆ.