ಉಡುಪಿ, ಜು. 16 (DaijiworldNews/AA): ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನಾಳೆ (ಜು.17 ರಂದು) ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಜಿಲ್ಲಾಧಿಕಾರಿ ಸ್ಪರೂಪ ಟಿ.ಕೆ ರಜೆ ಘೋಷಿಸಿದ್ದಾರೆ.

ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜು. 16ರಂದು ಹವಾಮಾನ ಇಲಾಖೆಯ ಎಲ್ಲೋ ಅಲರ್ಟ್ ನೀಡಿದೆ. ಹೀಗಾಗಿ ಹವಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾಳೆ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿರುತ್ತದೆ. ಉಳಿದಂತೆ ಎಲ್ಲಾ ಪದವಿ ಪೂರ್ವ, ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ಐಟಿಐ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿರುವುದಿಲ್ಲ.
ಇನ್ನು ಕಾಲೇಜುಗಳಲ್ಲಿ ಪಾಠ ಪ್ರವಚನಗಳನ್ನು ನಡೆಸುವಾಗ ಈ ಕೆಳಕಂಡ ಅಂಶಗಳನ್ನು ಪರಿಗಣಿಸುವಂತೆ ಕಾಲೇಜುಗಳ ಮುಖ್ಯಸ್ಥರಿಗೆ ಹಾಗೂ ಸಂಬಂಧ ಪಟ್ಟವರಿಗೆ ಸೂಚನೆಯನ್ನು ನೀಡಲಾಗಿದೆ.
1. ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ.
2. ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುವಾಗ ಹಾಗೂ ಮನೆಗೆ ತೆರಳುವ ಸಂದರ್ಭದಲ್ಲಿ ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ತಲುಪುವ ಬಗ್ಗೆ ಗಮನವಹಿಸುವುದು.
3. ಕಠಿಣವಾದ ದಾರಿ ಎಂದರೆ ತೋಡು ಹಳ್ಳಗಳನ್ನು ದಾಟಿ ಬರುವ ಸಂದರ್ಭಗಳು ಇರುವಂತಹ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಸುರಕ್ಷಿತವಾಗಿ ಇರುವಂತೆ ಸೂಚಿಸಲು ತಿಳಿಸಿದೆ.
4. ದುರ್ಬಲ/ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ ಪ್ರವಚನಗಳಿಗೆ ಬಳಸುವಂತಿಲ್ಲ. ಈ ನಿಟ್ಟಿನಲ್ಲಿ ಕಾಲೇಜುಗಳ ಮುಖ್ಯಸ್ಥರು ಕಾಲೇಜು ಕಟ್ಟಡಗಳ ಸುಸ್ಥಿತಿಯ ಬಗ್ಗೆ, ಗಮನಹರಿಸುವುದು ಹಾಗೂ ಯಾವುದೇ ಅವಘಡಗಳು ಉಂಟಾಗದಂತೆ ಸೂಕ್ತ ಕ್ರಮವಹಿಸುವುದು.
5. ಈಗ ಮಳೆಗಾಗಿ ಮುಂಜಾಗ್ರತಾ ಕ್ರಮವಾಗಿ ರಜೆಯನ್ನು ನೀಡಿ ಉಂಟಾಗಿರುವ ಕಲಿಕಾ ಸಮಯ ಕೊರತೆಯನ್ನು ಶನಿವಾರ ಮಧ್ಯಾಹ್ನ ಅಥವಾ ಭಾನುವಾರಗಳಂದು ಹೆಚ್ಚುವರಿ ತರಗತಿಗಳನ್ನು ನಡೆಸಿ ನಷ್ಟವನ್ನು ಸರಿದೂಗಿಸುವಂತೆ ತಿಳಿಸಿದೆ.
6. ವಿದ್ಯಾರ್ಥಿಗಳ ಪೋಷಕರು/ಕಾಲೇಜು ಮುಖ್ಯಸ್ಥರು, ವಿದ್ಯಾರ್ಥಿಗಳು ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರತೀರಕ್ಕೆ ಹೋಗದಂತೆ ಜಾಗ್ರತೆ ವಹಿಸುವುದು.
7. ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗುವ ವಾಹನಗಳ ಸುರಕ್ಷತೆಯನ್ನು ನೋಡಿಕೊಳ್ಳುವುದು.
8. ಕಾಲೇಜುಗಳಲ್ಲಿ ಪ್ರಾಕೃತಿಕ ವಿಕೋಪ ನಿಭಾಯಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುವುದು.