ಸುಳ್ಯ, ಜು. 19 (DaijiworldNews/AA): ಸುಳ್ಯ ತಾಲೂಕಿನಾದ್ಯಂತ ಕೃಷಿ ತೋಟದಲ್ಲಿ ಆಫ್ರಿಕನ್ ದೈತ್ಯ ಬಸವನಹುಳುಗಳು ಕಾಣಿಸಿಕೊಂಡಿದ್ದು, ಸ್ಥಳೀಯ ಕೃಷಿಕರಲ್ಲಿ ಆತಂಕ ಮೂಡಿದೆ. ಇದರ ನಿಯಂತ್ರಣ ಕೃಷಿಕರಿಗೆ ಸವಾಲಾಗಿದೆ.

ಆಫ್ರಿಕಾದ ದೈತ್ಯ ಬಸವನ ಹುಳು ವಿಶ್ವದ ಅತೀದೊಡ್ಡ ಹಾಗೂ ಅತ್ಯಂತ ಹಾನಿಕಾರಕ ಬಸವನ ಕೀಟಗಳಲ್ಲಿ ಒಂದಾಗಿದೆ. ಇವು ಗ್ಯಾಸೊಪೊಡಾ ವರ್ಗದ ಮೊಲಸ್ಕಾ ಜಾತಿಗೆ ಸೇರಿದ ದ್ವಿಲಿಂಗ ಜೀವಿಗಳು. ಇವುಗಳ ಮೂಲ ಪೂರ್ವ ಆಫ್ರಿಕಾ ದೇಶ. ಇದು ಶಂಕದ ಆಕಾರದ ಚಿಪ್ಪು ಹೊಂದಿದ್ದು, 2-12 ವರ್ಷದವರೆಗೂ ಜೀವಿಸುತ್ತದೆ. ತಮ್ಮ ಜೀವಿತಾವಧಿಯಲ್ಲಿ ಸುಮಾರು 1,200ರಷ್ಟು ಮೊಟ್ಟೆಗಳನ್ನು ಹಂತ ಹಂತವಾಗಿ ಇಡುತ್ತದೆ. ಇವು 50ಕ್ಕಿಂತ ಹೆಚ್ಚು ಸಸ್ಯ ಪ್ರಭೇದಗಳನ್ನು ತಿನ್ನುತ್ತವೆ ಎಂದು ಹೇಳಲಾಗಿದೆ.
ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಪಾನತ್ತಿಲ ಪ್ರದೇಶದಲ್ಲಿ 7-8 ಕೃಷಿಕರ ತೋಟದಲ್ಲಿ ಆಫ್ರಿಕನ್ ಬಸವನಹುಳುಗಳು ಕಾಣಿಸಿಕೊಂಡಿವೆ. ಹಗಲಿನಲ್ಲಿ ನೆಲದ ಮೇಲಿದ್ದು, ಗಿಡಗಳ ಬುಡದಲ್ಲಿ, ಪೊದೆಗಳಲ್ಲಿ ಅವಿತು, ಸಂಜೆ ಬಳಿಕ ಕೃಷಿ ಗಿಡಗಳನ್ನು ಹತ್ತಿ ವ್ಯಾಪಕ ಹಾನಿಯುಂಟುಮಾಡುತ್ತದೆ. ತೆಂಗಿನ ಮರ, ಅಡಿಕೆ ಮರ, ಬಾಳೆ ಗಿಡಗಳನ್ನು ಈ ಹುಳುಗಳು ನಾಶಪಡಿಸುತ್ತವೆ.
ಈ ಆಫ್ರಿಕನ್ ಬಸವನಹುಳುಗಳ ಹೆಚ್ಚಾಗಿ ಎಲೆಕೋಸು, ಸೆಗಣಿ, ಅನಾನಸ್, ಪಪ್ಪಾಯ, ಕೊಳೆತ ತರಕಾರಿಗಳಿಗೆ ಆಕರ್ಷಿಕವಾಗುತ್ತದೆ. ರೈತರು ತಮ್ಮ ಹೊಲಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಮತ್ತು ಬಸವನಹುಳುಗಳನ್ನು ಸಂಗ್ರಹಿಸಿ ನಾಶಪಡಿಸಬೇಕು. ಅವುಗಳ ಸಂತಾನೋತ್ಪತ್ತಿ ತಾಣಗಳನ್ನು ನಾಶಪಡಿಸಬೇಕು.
ತೀವ್ರತೆ ಹೆಚ್ಚಾಗಿರುವ ತೋಟದ ಮರಗಳ ಸುತ್ತಲೂ ಸೂಪರ್ ಫಾಸ್ಫೋಟ್ ಅಥವಾ ಬೂದಿ ಅಥವಾ ಸುಣ್ಣ ಅಥವಾ ಕಾಸ್ಟಿಕ್ ಸೋಡಾಗಳನ್ನು ಉಪಯೋಗಿಸಿ ಬಸವನಹುಳುಗಳ ಹಾವಳಿ ತಡೆಗಟ್ಟಬಹುದು. ತೋಟದಲ್ಲಿ ಸೆಗಣಿ ದ್ರಾವಣದಿಂದ ಒದ್ದೆ ಮಾಡಿದ ಹಸಿ ಗೋಣಿ ಚೀಲಗಳನ್ನು ಅಲ್ಲಲ್ಲಿ ಇಟ್ಟು, ಅವುಗಳನ್ನು ಸಂಗ್ರಹಿಸಿ ನಾಶಪಡಿಸಬೇಕು ಎಂದು ತೋಟಗಾರಿಕ ಇಲಾಖೆ ರೈತರಿಗೆ ಸೂಚಿಸಿದೆ.
ಉಬರಡ್ಕದ ಪಾನತ್ತಿನ ಭಾಗದಲ್ಲಿ ಈ ಹುಳುಗಳು ಕಂಡು ಬಂದ ತೋಟಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ತೋಟಗಾರಿಕೆ ಇಲಾಖೆ, ಕೆವಿಕೆ ಮಂಗಳೂರು ತಂಡದ ವತಿಯಿಂದ ಹತೋಟಿಗೆ ಕ್ರಮಗಳ ಬಗ್ಗೆ ರೈತರಿಗೆ ಸಲಹೆ, ಮಾಹಿತಿಯನ್ನು ನೀಡಿದ್ದೇವೆ. ಇದು 4-5 ವರ್ಷಗಳ ಹಿಂದೆ ಮಡಿಕೇರಿ, ಬೆಳ್ತಂಗಡಿ ಭಾಗದಲ್ಲಿ ಕಂಡುಬಂದಿದೆ. ರೈತರು ಈಗಲೇ ಇದನ್ನು ಹತೋಟಿ ಮಾಡಿದರೆ, ಉಲ್ಬಣಗೊಳ್ಳುವುದನ್ನು ತಡೆಯಬಹುದು. ರೈತರು ಮೊದಲು ಮೆಕ್ಯಾನಿಕಲ್ ಹಂತದಲ್ಲಿ, ಇತರ ಕ್ರಮದ ಮೂಲಕ ಹತೋಟಿಗೆ ತರಬಹುದು ಎಂದು ಸುಳ್ಯದ ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರಾದ ಪ್ರಮೋದ್ ಸಿ.ಎಂ ತಿಳಿಸಿದ್ದಾರೆ.