ಮಂಗಳೂರು, ಜು. 19 (DaijiworldNews/AA): ಮುಖ್ಯವಾಗಿ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ಅನುಕೂಲವಾಗುವಂತೆ ಮಂಗಳೂರು ಮತ್ತು ಅಯೋಧ್ಯೆ ನಡವೆ ನೇರ ರೈಲು ಸಂಪರ್ಕ ಒದಗಿಸುವಂತೆ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ದ.ಕ. ಉಡುಪಿ ಪ್ರದೇಶವು ಸನಾತನ ಸಂಪ್ರದಾಯಗಳಿಗೆ ಸಂಬಂಧಿಸಿ ಶ್ರೀಮಂತವಾದ ಪರಂಪರೆ ಹೊಂದಿದೆ. ಶ್ರದ್ಧೆ ಭಕ್ತಿಗೆ ಹೆಸರಾಗಿರುವ ಈ ನಾಡಿನಲ್ಲಿ ಭಜನಾ ಕಾರ್ಯಕ್ರಮ, ದೇವಾಲಯಗಳಲ್ಲಿ ಶ್ರೀರಾಮನನ್ನು ಭಜಿಸಲಾಗುತ್ತದೆ. ಅಯೋಧ್ಯೆಯ ಬಗ್ಗೆಯೂ ಇಲ್ಲಿನ ಜನರಿಗೆ ಅಪಾರ ಶ್ರದ್ದೆಯಿದೆ. ಆದ್ದರಿಂದ ಅಯೋಧ್ಯೆ ಸಂಪರ್ಕ ಸಂಬಂಧಿಸಿ ಈ ಭಾಗದ ಜನರ ಬೇಡಿಕೆ ಪರಿಗಣಿಸುವಂತೆ ಅವರು ಕೋರಿದರು.
ಸದ್ಯ ಅಯೋಧ್ಯೆ ಸಂಪರ್ಕಿಸಲು ಮಂಗಳೂರಿನಿಂದ ನೇರ ರೈಲು ಸಂಪರ್ಕವಿಲ್ಲ. ಬೆಂಗಳೂರು ಅಥವಾ ಇತರ ಮಾರ್ಗವಾಗಿ ಅಯೋಧ್ಯೆ ಸಾಗಲು 40 ಗಂಟೆಗಳನ್ನು ವ್ಯಯಿಸಬೇಕಾಗಿದೆ. ನೇರ ರೈಲು ಸಂಪರ್ಕ ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನ ಲಕ್ಷಾಂತರ ಯಾತ್ರಾರ್ಥಿಗಳಿಗೆ ಪ್ರಯೋಜನವಾಗಲಿದೆ. ಆದ್ದರಿಂದ ವಾರಕ್ಕೊಮ್ಮೆ ಅಥವಾ ವಾರಕ್ಕೆ ಎರಡು ಬಾರಿ ಮಂಗಳೂರಿನಿಂದ ಅಯೋಧ್ಯೆಗೆ ಹಾಸನ, ಅರಸಿಕೆರೆ, ಬಳ್ಳಾರಿ ಅಥವಾ ಕೊಂಕಣ ರೈಲ್ವೆ ಮಾರ್ಗವಾಗಿ ಮಡಗಾಂವ್, ಕಲ್ಯಾಣ ಮತ್ತು ನಾಗುರ ನಡುವೆ ರೈಲು ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಖ್ಯಾತಿಯ ಉಳ್ಳಾಲ ರಾಣಿ ಅಬ್ಬಕ್ಕರ 500ನೇ ಹುಟ್ಟುಹಬ್ಬದ ಸ್ಮರಣಾರ್ಥ ಕಣ್ಣೂರು ಎಕ್ಸ್ ಪ್ರೆಸ್ ಗೆ 'ರಾಣಿ ಅಬ್ಬಕ್ಕ ಎಕ್ಸ್ಪ್ರೆಸ್' ಎಂಬುದಾಗಿ ಮರು ನಾಮಕರಣಗೊಳಿಸಲು ಒತ್ತಾಯಿಸಿ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದರು.