ಉಡುಪಿ, ಜು. 19 (DaijiworldNews/AA): ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದ ಉಂಟಾಗಿರುವ ಹಾನಿಯನ್ನು ಸರಿಪಡಿಸಲು 50 ಕೋಟಿ ರೂಪಾಯಿಗಳ ವಿಶೇಷ ಅನುದಾನ ನೀಡುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಅತಿಯಾದ ಮತ್ತು ಅಕಾಲಿಕ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಮೇ ತಿಂಗಳೊಂದರಲ್ಲೇ ಉಡುಪಿಯಲ್ಲಿ ಸರಾಸರಿ 166 ಮಿ.ಮೀ ನಷ್ಟು ಆಗಬೇಕಿದ್ದ ಮಳೆ, 837 ಮಿ.ಮೀ ಮಳೆಯಾಗಿದೆ. ಈ ಮೂಲಕ ಶೇ. 409ರಷ್ಟು ಮಳೆ ಹೆಚ್ಚಳವಾಗಿದೆ. ಜೂನ್ ತಿಂಗಳಿನಲ್ಲಿಯೂ ದಾಖಲೆ ಪ್ರಮಾಣದ ಮಳೆಯಾಗಿದ್ದು, ಇದು ದೇಶದಲ್ಲೇ ಅತಿ ಹೆಚ್ಚು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕ್ಷೇತ್ರದ ಹಲವು ಭಾಗಗಳಲ್ಲಿ ವ್ಯಾಪಕ ಪ್ರವಾಹ ಉಂಟಾಗಿದ್ದು, ತುರ್ತು ಪರಿಹಾರ ಮತ್ತು ಪುನರ್ವಸತಿ ಕ್ರಮಗಳು ಅಗತ್ಯವಾಗಿದೆ. ಕಡಲತೀರದ ಹಲವು ಪ್ರದೇಶಗಳಲ್ಲಿ ಕಡಲ ಕೊರೆತ ಕಂಡುಬಂದಿದೆ. ಬಿರುಗಾಳಿ ಮತ್ತು ಭಾರೀ ಮಳೆಯಿಂದಾಗಿ ನೂರಾರು ಮರಗಳು ಧರೆಗುರುಳಿವೆ, ವಿದ್ಯುತ್ ಕಂಬಗಳು, ಮನೆಗಳು, ರಸ್ತೆಗಳು, ಚರಂಡಿಗಳು, ಶಾಲಾ ಕಟ್ಟಡಗಳು, ಸೇತುವೆಗಳು ಮತ್ತು ಸಣ್ಣ ಸೇತುವೆಗಳಿಗೆ ಹಾನಿಯಾಗಿದೆ.
ಕಳೆದ ಎರಡು ವರ್ಷಗಳಿಂದ ಪ್ರಕೃತಿ ವಿಕೋಪ ಪರಿಹಾರ ಯೋಜನೆಯಡಿ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಗ್ರಾಮೀಣ ರಸ್ತೆಗಳ ನಿರ್ವಹಣೆ ಕಳಪೆಯಾಗಿದ್ದು, ಸಾರಿಗೆ ಸವಾಲುಗಳು ಉಲ್ಬಣಿಸಿವೆ. ಸಾರ್ವಜನಿಕ ಮೂಲಸೌಕರ್ಯಗಳನ್ನು ರಕ್ಷಿಸಲು ಮತ್ತು ದುರಸ್ತಿಪಡಿಸಲು ತುರ್ತು ಅಗತ್ಯವಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು. ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ನೈಸರ್ಗಿಕ ವಿಕೋಪ ಪರಿಹಾರದಡಿ 50 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಅನುಮೋದಿಸುವಂತೆ ಸಿಎಂಗೆ ಮನವಿ ಮಾಡಿದರು.