ಮಂಗಳೂರು, ಜು. 19 (DaijiworldNews/TA): ಮಂಗಳೂರಿನಿಂದ ಬೆಂಗಳೂರಿಗೆ ಚಿಕಿತ್ಸೆಗೆಂದು ನವಜಾತ ಶಿಶುವನ್ನು ಆ್ಯಂಬುಲೆನ್ಸ್ನಲ್ಲಿ ಸುಳ್ಯದ ಚಾಲಕ ಕೇವಲ 4 ಗಂಟೆ 50 ನಿಮಿಷದಲ್ಲಿ ಕರೆದೊಯ್ದಿದ್ದಾರೆ. ಸುಳ್ಯದ ಕೆವಿಜಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ಹನೀಫ್, ಮಂಗಳೂರು ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರಕ್ಕೆ 15 ದಿನದ ಶಿಶುವನ್ನು ತುರ್ತು ಚಿಕಿತ್ಸೆಗೆ ಕರೆದೊಯ್ದರು.

ಈ ನವಜಾತು ಶಿಶು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿತ್ತು. ವೈದ್ಯರು ಆದಷ್ಟು ತುರ್ತಾಗಿ ಮಗುವನ್ನು ಕರೆದೊಯ್ಯುವಂತೆ ಸೂಚಿಸಿದಾಗ, ಅದರ ಪೋಷಕರು ಆ್ಯಂಬುಲೆನ್ಸ್ಗೆ ಮನವಿ ಮಾಡಿದರು. ಕೂಡಲೇ ಮಂಗಳೂರಿಗೆ ತೆರಳಿದ ಚಾಲಕ ಹನೀಫ್, ಜು. 17ರಂದು ಸಂಜೆ 4ಕ್ಕೆ ಮಗುವಿನೊಂದಿಗೆ ಹೊರಟು ರಾತ್ರಿ 8.50ಕ್ಕೆ ಜಯದೇವ ಆಸ್ಪತ್ರೆಗೆ ತಲುಪಿಸಿ ಆಪತ್ಭಾಂದವನಂತೆ ಕಾರ್ಯ ನಿರ್ವಹಿಸಿದರು.
ಮಂಗಳೂರು-ಪುತ್ತೂರು-ಸುಳ್ಯ-ಮಡಿಕೇರಿ-ಮೈಸೂರು ಮೂಲಕ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಆ್ಯಂಬುಲೆನ್ಸ್ ತೆರಳಲು ಬೇಕಾದ ದಾರಿಯ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತು. ಅದರಂತೆ ಆ್ಯಂಬುಲೆನ್ಸ್ ಸರಾಗವಾಗಿ ಸಾಗಲು ಸಾರ್ವಜನಿಕರು ಸಹಕರಿಸಿದರು. ಕೆವಿಜಿ ಆ್ಯಂಬುಲೆನ್ಸ್ ವಾಹನ ಹಾಗೂ ಸುಳ್ಯದ ಶಿವ ಆ್ಯಂಬುಲೆನ್ಸ್ ಚಾಲಕ ಶಿವ ಹಾಗೂ ಸಮೀರ್ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಅಲ್ಲಲ್ಲಿ ಹೈವೇ ಪೆಟ್ರೋಲಿಂಗ್ ಸಿಬಂದಿ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.