ಸುಳ್ಯ , ಜು. 19 (DaijiworldNews/TA): ಕಲಿಕೆಯ ಹಂಬಲವಿದ್ದರೆ ವಯಸ್ಸಿನ ಹಂಗಿಲ್ಲ ಎಂಬ ಮಾತಿಗೆ ಸುಳ್ಯ ಈ ಮಹಿಳೆ ಸಾಕ್ಷಿಯಾಗಿದ್ದಾರೆ. ತಮ್ಮ 52ನೇ ವಯಸ್ಸಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿರುವುದು ಇವರ ಸಾಧನೆ. ಅಜ್ಜಾವರ ಗ್ರಾಮದ ಅಟ್ಲೂರು ನಿವಾಸಿ, ನಿವೃತ್ತ ಶಿಕ್ಷಕ ಅಚ್ಚುತ ಅಟ್ಲೂರು ಅವರ ಪತ್ನಿ ಜಯಂತಿ ಈ ಸಾಧಕಿ.

ಜಯಂತಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಕಲಾ ವಿಭಾಗದಲ್ಲಿ 307 ಅಂಕ ಗಳಿಸಿದ್ದಾರೆ (ಕನ್ನಡ 57, ಇಂಗ್ಲಿಷ್ 50, ಇತಿಹಾಸ 55, ಅರ್ಥಶಾಸ್ತ್ರ 51, ರಾಜ್ಯ ಶಾಸ್ತ್ರ 50, ಸಮಾಜಶಾಸ್ತ್ರ 49). ಜಯಂತಿ ಅವರು ಅಜ್ಜಾವರ ಗ್ರಾ.ಪಂ.ನ ಮಾಜಿ ಸದಸ್ಯರಾಗಿದ್ದು, ಸುಳ್ಯ ಹಾಗೂ ಪುತ್ತೂರಿನಲ್ಲಿ ಮಾರ್ಗದರ್ಶನ ಪಡೆದು ಪರೀಕ್ಷೆ ಬರೆದಿದ್ದಾರೆ.