ಮಂಗಳೂರು, ಜು. 19 (DaijiworldNews/TA): ಸಾಧಕ ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗಬೇಕು ಎನ್ನುವ ನೆಲೆಯಲ್ಲಿ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಕ್ಕೂ ಸಂಘಟನೆಯ ಕೊಡುಗೆ ಅಗತ್ಯವಿದೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಹಮ್ಮದ್ ನಝೀರ್ ಅಭಿಪ್ರಾಯಪಟ್ಟರು.

ಜಮೀಯತುಲ್ ಫಲಾಹ್ ಉಳ್ಳಾಲ ತಾಲೂಕು ಘಟಕದಿಂದ ಕಂಕನಾಡಿ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಶನಿವಾರ ನಡೆದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಎಸ್ಸೆಸ್ಸೆಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಮತ್ತು ದ.ಕ.ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ಮಾತನಾಡಿ, ಸಮುದಾಯದ ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ ಸಂಘಟನೆ ಶ್ರಮಿಸುತ್ತಿದೆ, ಆರ್ಥಿಕ ಸಂಕಷ್ಟ ಇರುವ ವಿದ್ಯಾರ್ಥಿಗಳೊಂದಿಗೆ ಸಂಘಟನೆ ಸದಾ ಇದ್ದು ಯಾವುದೇ ಕಾರಣಕ್ಕೂ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಬಾರದು ಎಂದು ತಿಳಿಸಿದರು. ಜಮೀಯತುಲ್ ಫಲಾಹ್ ಉಳ್ಳಾಲ ತಾಲೂಕು ಘಟಕಾಧ್ಯಕ್ಷ ಅಬ್ದುಲ್ ನಾಸೀರ್ ಕೆ.ಕೆ. ಅಧ್ಯಕ್ಷತೆ ವಹಿಸಿ, ಉಳ್ಳಾಲ ತಾಲೂಕಿನಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ಘನತೆ, ಗೌರವ ಒದಗಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ ನೀಡಿ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಲಾಗಿದೆ, ಎಸ್ಸೆಸ್ಸೆಎಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಸಮುದಾಯದ ಮಕ್ಕಳಿಗೆ ಅಭಿನಂದಿಸುವ ಮೂಲಕ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಜಮೀಯತುಲ್ ಫಲಾಹ್ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಗಫೂರ್, ಮಂಗಳೂರು ತಾಲೂಕು ಘಟಲಾಧ್ಯಕ್ಷ ಮುಹಮ್ಮದ್ ಬಪ್ಪಲಿಗೆ, ಮಂಗಳೂರು ಎಂ.ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ರಶೀದ್ ವಿಟ್ಲ, ಉಳ್ಳಾಲ ತಾಲೂಕು ಘಟಕ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕೋಡಿಜಾಲ್ ಮುಖ್ಯ ಅತಿಥಿಗಳಾಗಿದ್ದರು. ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ತಪ್ಷಿಯಾ ನಡುಪದವು, ಜತೆಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಸದಸ್ಯರಾದ ಹಸನ್ ಕುಂಞಿ ಕೋಡಿಜಾಲ್, ಅಬ್ದುಲ್ ರಹ್ಮಾನ್ ಪಾನೀರ್, ಸಿ.ಎಂ.ಶರೀಫ್ ಪಟ್ಟೋರಿ ಮೊದಲಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಕೆಎಂಕೆ ಮಂಜನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಹ್ಮದ್ ಕುಂಞಿ ಮಾಸ್ಟರ್ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಶೌಕತ್ ಅಲಿ ಕೊಣಾಜೆ ವಂದಿಸಿದರು. ಜತೆಕಾರ್ಯದರ್ಶಿ ಎ.ಕೆ.ಅಬ್ದುಲ್ ರಹ್ಮಾನ್ ಕೋಡಿಜಾಲ್ ಕಾರ್ಯಕ್ರಮ ನಿರೂಪಿಸಿದರು.