ಪುತ್ತೂರು, ಜು. 19 (DaijiworldNews/AA): ಹಿರಿಯ ಯಕ್ಷಗಾನ ಕಲಾವಿದ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾತಾಳ ವೆಂಕಟರಮಣ ಭಟ್(92) ಅವರು ಉಪ್ಪಿನಂಗಡಿಯಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಜುಲೈ 19 ರಂದು ನಿಧನರಾದರು.

ಯಕ್ಷಗಾನ ಲೋಕದಲ್ಲಿ ಹೆಸರಾಂತ ವ್ಯಕ್ತಿಯಾಗಿದ್ದ ಪಾತಾಳ ವೆಂಕಟರಮಣ ಭಟ್ ಅವರು ದಶಕಗಳ ಕಾಲದ ಶ್ರೀಮಂತ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರು ಹಿರಿಯ ಪುತ್ರ ಖ್ಯಾತ ಯಕ್ಷಗಾನ ಕಲಾವಿದ ಅಂಬಾಪ್ರಸಾದ್ ಪಾತಾಳ, ಕಿರಿಯ ಪುತ್ರ ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ನಿರ್ದೇಶಕ ಶ್ರೀರಾಮ ಭಟ್ ಪಾತಾಳ ಸಹಿತ ನಾಲ್ವರು ಹೆಣ್ಣುಮಕ್ಕಳು, ಮೊಮ್ಮಕ್ಕಳು ಮತ್ತು ಅಭಿಮಾನಿಗಳು ಮತ್ತು ಹಿತೈಷಿಗಳನ್ನು ಅಗಲಿದ್ದಾರೆ.
ತೆಂಕುತಿಟ್ಟು ಮತ್ತು ಬಡಗುತಿಟ್ಟು ಯಕ್ಷಗಾನ ಶೈಲಿಗಳಲ್ಲಿ ಉತ್ತಮ ಕಲಾವಿದರಾಗಿದ್ದ ಪಾತಾಳ ವೆಂಕಟರಮಣ ಅವರು, ತಮ್ಮ ಅದ್ಭುತ ರಂಗ ಪ್ರದರ್ಶನ, ಅಭಿವ್ಯಕ್ತಿಶೀಲ ನಟನೆ ಮತ್ತು ಆಕರ್ಷಕ ನೃತ್ಯಕ್ಕೆ ಹೆಸರುವಾಸಿಯಾಗಿದ್ದರು.
1951 ರಲ್ಲಿ ಜೀವನೋಪಾಯಕ್ಕಾಗಿ ಕಾಂಚನ ನಾಟಕ ಕಂಪನಿಯಲ್ಲಿ ಅಡುಗೆಯವರಾಗಿ ಸೇರಿದಾಗ ಅವರ ಯಕ್ಷಗಾನ ಪ್ರಯಾಣ ಪ್ರಾರಂಭವಾಯಿತು. ಅವರ ಸಹಜ ಪ್ರತಿಭೆಯಿಂದ ಗುರುತಿಸಲ್ಪಟ್ಟು ಶೀಘ್ರದಲ್ಲೇ ಪ್ರಮುಖ ಸ್ರೀ ಪಾತ್ರಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.
1953 ರಲ್ಲಿ ವೃತ್ತಿ ಮೇಳಕ್ಕೆ ಸೇರಿದ ಅವರ, 1981 ರವರೆಗೆ ಪ್ರದರ್ಶನ ನೀಡಿದರು. ಸೌಕೂರು, ಮೂಲ್ಕಿ, ಸುರತ್ಕಲ್ ಮತ್ತು ಧರ್ಮಸ್ಥಳದಂತಹ ವಿವಿಧ ತಂಡಗಳಲ್ಲಿ ಯಶಸ್ವಿ ತಿರುಗಾಟ ನಡೆಸಿದರು. ರಂಭೆ, ಊರ್ವಶಿ, ಮೇನಕೆ, ಸತ್ಯಭಾಮೆ, ಸುಭದ್ರೆ, ದ್ರೌಪದಿ, ಮೀನಾಕ್ಷಿ ಮತ್ತು ಸ್ವಯಂಪ್ರಭೆಯಂತಹಾ ಪೌರಾಣಿಕ ಪಾತ್ರಗಳಿಗೆ ತನ್ನದೇ ಆದ ಮೆರಗು ನೀಡಿದರು. ಪಾತಾಳ ಅವರು ಬೇಲೂರಿನ ಶಿಲಾ ಬಾಲಿಕೆಯರ ಅಂಗಭಂಗಿಗಳನ್ನು ಬೇಲೂರಿಗೆ ಹೋಗಿ ಸ್ವತಃ ಅಭ್ಯಸಿಸಿ ಯಕ್ಷಗಾನದಲ್ಲಿ ಅಳವಡಿಸಿಕೊಂಡರು.
ಕಲಾ ಪ್ರಕಾರಕ್ಕೆ ಅವರ ಅಪಾರ ಕೊಡುಗೆಯನ್ನು ಗುರುತಿಸಿ, ಪಾತಾಳ ವೆಂಕಟರಮಣ ಭಟ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ವಿದ್ಯಾಮಾನ್ಯ ಪ್ರಶಸ್ತಿ, ಯಕ್ಷ ಕಲಾನಿಧಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಪಟ್ಟಾಜೆ ಪ್ರಶಸ್ತಿ, ದೇರಾಜೆ ಮತ್ತು ಕಲ್ಕುರ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಚೆನ್ನೈನ ಹಿಂದೂ ಧರ್ಮ ಸಂಘವು ಅವರಿಗೆ 'ಮಣಿವಿಳಾ' ಎಂಬ ಗೌರವ ಬಿರುದನ್ನು ನೀಡಿದೆ.