ಉಳ್ಳಾಲ, ಜು. 19 (DaijiworldNews/TA): ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಉಳ್ಳಾಲ ಬೈಲ್ ತನಕ ಅಗಲೀಕರಣಕ್ಕೆ 38 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಶೀಘ್ರದಲ್ಲೇ ನಡೆಯಲಿದ್ದು, ಕಳೆದ 75 ವರುಷಗಳಿಂದ ಬೇಡಿಕೆಯಲ್ಲಿದ್ದ ಒಳಫೇಟೆ ಸಂಪರ್ಕಿಸುವ ರೈಲ್ವೇ ಟ್ರ್ಯಾಕ್ಗೆ ಅಂಡರ್ಪಾಸ್ ಕಾಮಗಾರಿ ನಡೆಸಲು ರೈಲ್ವೇ ಇಲಾಖೆ ಒಪ್ಪಿಗೆ ನೀಡಿದ್ದು, 2 ಕೋಟಿ ರೂ, ವೆಚ್ಚದಲ್ಲಿ ಅಂಡರ್ಪಾಸ್ ಕಾಮಗಾರಿ ನಡೆಯಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.

ಅವರು ತೊಕ್ಕೊಟ್ಟು ಒಳಪೇಟಯಲ್ಲಿ ರೈಲ್ವೇ ಹಳಿಗೆ ಅಂಡರ್ಪಾಸ್ ನಿರ್ಮಾಣ ಮತ್ತು ರೈಲ್ವೇ ಓವರ್ಬ್ರಿಡ್ಜ್ ಅಗಲೀಕರಣಕ್ಕೆ ಸಂಬಂಧಿಸಿದಂತೆ ರೈಲ್ವೇ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು. ತೊಕ್ಕೋಟ್ಟು ಒಳಪೇಟೆ ಉಳ್ಳಾಲದ ಕೇಂದ್ರ ಪ್ರದೇಶ, ರಾಷ್ಟ್ರೀಯ ಹೆದ್ದಾರಿಯಿಂದ ಉಳ್ಳಾಲ ನಗರಕ್ಕೆ ಸಂಪರ್ಕಿಸುವ ಕೊಂಡಿ ರಸ್ತೆಯಾಗಿದ್ದು, ರೈಲ್ವೇ ಹಳಿಯನ್ನು ದಾಟಿಕೊಂಡು ಸಾರ್ವಜನಿಕ ಮೈದಾನ, ಮಾರ್ಕೆಟ್, ಶಾಲಾ ಕಾಲೇಜು, ದರ್ಗಾ, ದೇವಸ್ಥಾನ, ಚರ್ಚಗೆ ಪ್ರತೀ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೋಗುತ್ತಿದ್ದು, ಕಳೆದ 75 ವರುಷಗಳಿಂದ ಈ ರೈಲ್ವೇ ಹಳಿಯ ಮೇಲೆಯೇ ಎರಡೂ ಬದಿಗೆ ಜನರು ದಾಟುತ್ತಿದ್ದರು, ಕೆಲವೊಂದು ಕಡೆ ಕೆಲವು ಅನಾಹುತಗಳು ಆಗಿದ್ದವು, ಇದರ ಬಗ್ಗೆ ರೈಲ್ವೇಯವರು ಬಹಳಷ್ಟು ವರ್ಷದಿಂದ ಈ ರಸ್ತೆಯನ್ನು ಬಂದ್ ಮಾಡಲು ಬೇಡಿಕೆಯನ್ನಿಟ್ಟಿದ್ದರೂ ಕೂಡ ಸಂದರ್ಭಕ್ಕೆ ಅನುಗುಣವಾಗಿ ಜನಸಾಮಾನ್ಯರಿಗೆ ತೊಂದರೆ ಆಗದ ರೀತಿಯಲ್ಲಿ ನಿಲ್ಲಿಸಿದ್ದೆವು.
ಇದೀಗ ಕೇಂದ್ರ ರೈಲ್ವೇ ಇಲಾಖೆಯವರು ಅಂಡರ್ಪಾಸ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದು, ಬಹು ವರ್ಷದ ಬೇಡಿಕೆಯಾದ ಅಂಡರ್ ಪಾಸ್ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ ಎಂದರು. ಈ ಸಂದರ್ಭದಲ್ಲಿ ಮಂಗಳೂರು ಸಹಾಯಕ ಡಿವಿಜನ್ ಇಂಜಿನಿಯರ್ ಅಶೋಕ್, ಮಂಗಳೂರು ಹಿರಿಯ ಸೀನಿಯರ್ ಸೆಕ್ಷನ್ ಇಂಜಿನಿಯರ್ ಮುಹಸಿನ್, ಕಣ್ಣೂರು ಹಿರಿಯ ಸೆಕ್ಷನ್ ಇಂಜಿನಿಯರ್ ಅಕ್ಷಯ್, ಉಳ್ಳಾಲ ನಗರ ಸಭೆ ಅಧ್ಯಕ್ಷ ಶಶಿಕಲಾ, ಉಪಾಧ್ಯಕ್ಷ ಸಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್, ನಗರ ಸಭಾ ಸದಸ್ಯರಾದ ಅಯ್ಯೂಬ್ ಮಂಚಿಲ, ಗೀತಾಬಾಯಿ, ರವಿಚಂದ್ರ ಗಟ್ಟಿ, ನಗರ ಸಭೆ ಆಯುಕ್ತ ನವೀನ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.