ಬಂಟ್ವಾಳ, ಜು. 20 (DaijiworldNews/AA): ವ್ಯಕ್ತಿಯೋರ್ವ ಸಾಲ ಮಾಡಿ ಖರೀದಿಸಿದ ಕಾರನ್ನು ಸಾಲ ಮರುಪಾವತಿಸದೇ ಇದ್ದರೂ ಕಾರಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರ ಹೆಸರಿಗೆ ವರ್ಗಾಯಿಸಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳದ ಬೇಡಗುಡ್ಡೆ ನಿವಾಸಿ ಗಿರೀಶ್ ವಿರುದ್ಧ ಶ್ರೀರಾಮ ಫೈನಾನ್ಸ್ ನ ಬಿ.ಸಿ.ರೋಡು ಶಾಖೆಯ ಮ್ಯಾನೇಜರ್ ಪುನೀತ್ಕುಮಾರ್ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯು 2023ರ ಜೂನ್ 27ರಂದು ಟೊಯೋಟ ಇನ್ನೋವಾ ಕಾರು ಖರೀದಿಗಾಗಿ 8,75,000 ರೂ. ಸಾಲ ಪಡೆದು ಬಡ್ಡಿ ಸೇರಿ ಒಟ್ಟು 13,07,663 ರೂ.ಗಳನ್ನು 48 ಕಂತುಗಳಲ್ಲಿ ಮರುಪಾವತಿಗೆ ಒಪ್ಪಿ ಕರಾರು ಪತ್ರಗಳಿಗೆ ಸಹಿ ಮಾಡಿದ್ದರು. ಬಿಳಿಯೂರಿನ ರಾಜೇಶ್ ರೈ ಸಾಲಕ್ಕೆ ಜಾಮೀನುದಾರರಾಗಿದ್ದರು. ಆದರೆ ಬಳಿಕ ಆರೋಪಿಯು ಸಾಲದ ಕಂತು ಮರು ಪಾವತಿ ಮಾಡಿರಲಿಲ್ಲ.
ಸಾಲಗಾರ ಗಿರೀಶ ಸಾಲದ ಕಂತು ಮರುಪಾವತಿ ಮಾಡದೇ ಇದ್ದು, ಕಂತುಗಳ ಪಾವತಿ ಜತೆಗೆ ವಾಹನವನ್ನು ವಶಕ್ಕೆ ನೀಡಲು ಸಾಲಗಾರ ಹಾಗೂ ಜಾಮೀನುದಾರರಿಗೆ ನೋಟಿಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೂ. 23ರಂದು ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ದಾಖಲೆಯನ್ನು ಪರಿಶೀಲಿಸಿದಾಗ ವಾಹನ ದಾಖಲೆ ಬದಲಾಗಿರುವುದು ಕಂಡುಬಂದಿದೆ.
ಆರೋಪಿ ಗಿರೀಶನು ರಾಜೇಶ್ ರೈ, ರೋಹಿತ್, ಮಂಜುನಾಥ್ರೊಂದಿಗೆ ಸೇರಿಕೊಂಡು ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ, ಶ್ರೀರಾಮ ಫೈನಾನ್ಸ್ ಲೆಟರ್ಹೆಡ್, ಸೀಲ್ ಮತ್ತು ಸಹಿಯನ್ನು ನಕಲಿಯಾಗಿ ಬಳಸಿಕೊಂಡು ಆರ್ಸಿಯ ಎಚ್ಪಿ ಎಂಟ್ರಿಯನ್ನೂ ಅಳಿಸಿ ಹಾಕಿ ರೋಹಿತ್, ಮಂಜುನಾಥ್ ಅವರು ವಾಹನವನ್ನು ಇಂದ್ರೇಶ್ಕುಮಾರ್ ವಿ. ಅವರಿಗೆ ವರ್ಗಾವಣೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶಾಖೆಯ ಮ್ಯಾನೇಜರ್ ಅವರ ದೂರಿನ ಆಧಾರದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.