ಬಂಟ್ವಾಳ, ಜು. 20 (DaijiworldNews/AA): ಖ್ಯಾತ ತೆಂಕುತಿಟ್ಟು ಯಕ್ಷಗಾನದ ಖ್ಯಾತ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ (60) ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಭಾನುವಾರ ಕೊನೆಯುಸಿರೆಳೆದಿದ್ದಾರೆ.

ಪುಂಜಾಲಕಟ್ಟೆ ಸಮೀಪದ ಸಂಗಬೆಟ್ಟು ಗ್ರಾಮದ ಮಂಚಕಲ್ಲು ನಿವಾಸಿಯಾಗಿರುವ ಇವರು ಹನುಮಗಿರಿ ಮೇಳದ ಹಿರಿಯ ಕಲಾವಿದರಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಇತ್ತೀಚಿನವರೆಗೂ ಹನುಮಗಿರಿ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿದ್ದ ಸದಾಶಿವ ಶೆಟ್ಟಿಗಾರ್ ಅವರು, ಮೂರು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ತಿರುಗಾಟ ನಡೆಸಿದರು. ಅವರು ಖ್ಯಾತ ಯಕ್ಷಗಾನ ಗುರುಗಳಾದ ರೆಂಜಾಳ ರಾಮಕೃಷ್ಣ ರಾವ್ ಮತ್ತು ಬಣ್ಣದ ಮಹಾಲಿಂಗ ಅವರಿಂದ ನಾಟ್ಯಾಭ್ಯಾಸ ಕಲಿತರು.
ಸದಾಶಿವ ಶೆಟ್ಟಿಗಾರ್ ಅವರು ತಮ್ಮ 36 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ, ಕಟೀಲು, ಧರ್ಮಸ್ಥಳ, ಹೊಸನಗರ, ಎಡನೀರು ಮತ್ತು ಹನುಮಗಿರಿಯಂತಹ ಪ್ರಸಿದ್ಧ ಮೇಳಗಳಲ್ಲಿ ಪ್ರದರ್ಶನ ನೀಡಿದರು. ಕಳೆದ ಕೆಲವು ತಿಂಗಳುಗಳ ಹಿಂದೆ ಹನುಮಗಿರಿ ಮೇಳದಲ್ಲಿ ತಿರುಗಾಟ ಮುಗಿಸಿದ ಅವರು ನಿವೃತ್ತಿಯನ್ನೂ ಘೋಷಿಸಿದ್ದರು.
ಕಳೆದ ಹಲವು ಸಮಯದಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ 10 ದಿನಗಳ ಹಿಂದಷ್ಟೇ ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ಯಕ್ಷಮಂಗಳ ಪ್ರಶಸ್ತಿ ನೀಡಿ ಗೌರವಿಸಿತ್ತು. ಪೇಜಾವರ ಶ್ರೀಗಳ ಜನ್ಮದಿನದಂದು ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ ಮತ್ತು ಅರಸಂಕಲ ಪ್ರಶಸ್ತಿ ಸೇರಿದಂತೆ ಇತರ ಪ್ರಶಸ್ತಿಗಳನ್ನು ಅವರು ಪಡೆದಿದ್ದರು.