ಸುಳ್ಯ, ಜು. 21 (DaijiworldNews/AA): ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಿಕ್ಕಿದ ಚಿನ್ನದ ಸರವನ್ನು ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಅವರ ಸಮ್ಮುಖದಲ್ಲಿ ಸರದ ವಾರಸುದಾರರಾದ ಉಜಿರೆಯ ಸಚಿನ್ ಅವರಿಗೆ ದೇಗುಲದ ಭದ್ರತಾ ಸಿಬ್ಬಂದಿಗಳ ಮುಖ್ಯಸ್ಥ ದಾಮೋದರ ನಾಯರ್ ಅವರು ಹಿಂತಿರುಗಿಸಿದರು.

ದೇಗುಲದಲ್ಲಿ ಭಾನುವಾರ ಸರತಿ ಸಾಲಿನಲ್ಲಿ ಬೆಂಗಳೂರಿನ ಭಕ್ತ ಶ್ರೀನಿವಾಸಪ್ಪ ಅವರಿಗೆ ಚಿನ್ನದ ಸರ ಸಿಕ್ಕಿತ್ತು. ಅದನ್ನು ಅವರು ದೇಗುಲದ ಭದ್ರತಾ ಸಿಬ್ಬಂದಿಗಳ ಮುಖ್ಯಸ್ಥ ದಾಮೋದರ ಅವರಿಗೆ ಹಸ್ತಾಂತರಿಸಿದ್ದರು. ಇದಾದ ಬಳಿಕ ಸರ ಸಿಕ್ಕ ಬಗ್ಗೆ ದಾಮೋದರ ಅವರು ಧ್ವನಿವರ್ಧಕದ ಮೂಲಕ ಹಲವು ಬಾರಿ ಘೋಷಿಸಿದರು. ಜೊತೆಗೆ ಸರ ದೊರೆತ ಬಗ್ಗೆ ಭಕ್ತರಿಗೆ ಮಾಹಿತಿ ನೀಡಿದರು.
ಈ ವೇಳೆ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಸಚಿನ್ ಅವರಿಗೆ ತನ್ನ ಮಗಳ ಚಿನ್ನದ ಸರ ಕಳೆದುಹೋಗಿರುವುದು ಗಮನಕ್ಕೆ ಬಂದಿದೆ. ಬಳಿಕ ಅವರು ದಾಮೋದರ ಅವರನ್ನು ಸಂಪರ್ಕಿಸಿ, ಸರದ ಗುರುತು ಹೇಳಿ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸರವನ್ನು ಪಡೆದರು.