ಬಂಟ್ವಾಳ, ಜು. 21 (DaijiworldNews/AA): ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಬಾಬತೋಟದಲ್ಲಿ ಕೃಷಿಕರೊಬ್ಬರ ಮನೆ ಆವರಣಕ್ಕೆ ಚಿರತೆಯೊಂದು ನುಗ್ಗಿ ನಾಯಿಗಳ ಮೇಲೆ ದಾಳಿ ಮಾಡಲು ಯತ್ನಿಸಿದೆ. ಆದರೆ ನಾಯಿಗಳು ಜೋರಾಗಿ ಬೊಗಳಿದ ಕಾರಣ ಚಿರತೆ ಓಡಿಹೋಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

ಜುಲೈ 17 ರಂದು ತಡರಾತ್ರಿ 11:30 ರ ಸುಮಾರಿಗೆ ಬಾಬತೋಟ ನಿವಾಸಿ ಪ್ರಕಾಶ್ ಪೂಜಾರಿ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಸಿಸಿ ಕ್ಯಾಮೆರಾದ ದೃಶ್ಯಗಳನ್ನು ವೀಕ್ಷಿಸುವ ಮಾನಿಟರ್ ಹಾಳಾಗಿದ್ದ ಹಿನ್ನಲೆಯಲ್ಲಿ ಬಂದಿರುವುದು ಚಿರತೆ ಎಂಬುದು ಭಾನುವಾರ ಮಾನಿಟರ್ ದುರಸ್ತಿಯಾದ ಬಳಿಕವೇ ಬೆಳಕಿಗೆ ಬಂದಿದೆ.
ಚಿರತೆ ಬಂದ ಸಮಯದಲ್ಲಿ, ಮನೆಯಲ್ಲಿದ್ದ ಎರಡು ನಾಯಿಗಳು ಯಾರೋ ಬಂದಂತೆ ಜೋರಾಗಿ ಬೊಗಳಲು ಪ್ರಾರಂಭಿಸಿದವು. ಆ ವೇಳೆ ಪ್ರಕಾಶ್ ಹೊರಗೆ ಪರಿಶೀಲಿಸಲು ಹೊರಟಾಗ ಕುಟುಂಬ ಸದಸ್ಯರು ಭಯದಿಂದ ಅವರನ್ನು ತಡೆದಿದ್ದರು. ಚಿರತೆಯು ನಾಯಿಗಳ ಮೇಲೆ ಎರಗಿ ಓಡಿ ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದರೂ, ಅದನ್ನು ನೋಡುವ ಮಾನಿಟರ್ ಹಾಳಾಗಿತ್ತು.
ಮೊದಲಿಗೆ, ಯಾರೋ ಒಳನುಗ್ಗಲು ಪ್ರಯತ್ನಿಸಿದ್ದಾರೆ ಎಂದು ಕುಟುಂಬದವರು ಶಂಕಿಸಿದ್ದರು ಆದರೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ಮರುದಿನ ಮಾನಿಟರ್ ದುರಸ್ತಿ ಮಾಡಿದ ನಂತರ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಚಿರತೆ ಬಂದಿರುವುದು ಕಂಡುಬಂದಿದೆ. ಚಿರತೆಯು ಎರಗಿದ ಸಂದರ್ಭ ಒಂದು ನಾಯಿಗೆ ಸಣ್ಣಪುಟ್ಟ ಗಾಯವಾಗಿತ್ತು, ಇದನ್ನು ಆರಂಭದಲ್ಲಿ ನಾಯಿಗಳ ನಡುವಿನ ಜಗಳದಿಂದಾಗಿದೆ ಎಂದು ಭಾವಿಸಿದ್ದರು.
ಚಿರತೆ ಬಂದಿರುವ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ, ಅವರು ಪಟಾಕಿ ಸಿಡಿಸಿ ಓಡಿಸುವಂತೆ ಮಾತ್ರ ಸಲಹೆ ನೀಡಿದ್ದಾರೆ ಎಂದು ಪ್ರಕಾಶ್ ಪೂಜಾರಿ ತಿಳಿಸಿದ್ದಾರೆ.