Karavali
ಗುಂಡಿಗಳಿಂದ ತುಂಬಿದ ಉಡುಪಿ ನಗರದ ಪ್ರಮುಖ ರಸ್ತೆಗಳು: ವಾಹನ ಸವಾರರ ಪರದಾಟ
- Mon, Jul 21 2025 06:44:33 PM
-
ಉಡುಪಿ, ಜು. 21 (DaijiworldNews/AA): ಉಡುಪಿ ನಗರದ ರಸ್ತೆಗಳು ಹದಗೆಟ್ಟಿದ್ದು, ವಾಹನ ಸವಾರರಿಗೆ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ನಗರದ ಬಹುತೇಕ ಎಲ್ಲಾ ಪ್ರಮುಖ ರಸ್ತೆಗಳು ದೊಡ್ಡ ದೊಡ್ಡ ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ.
ಕಳೆದ ಕೆಲವು ವಾರಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ರಸ್ತೆಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಟ್ಟಿದೆ. ಮಳೆ ನೀರು ಗುಂಡಿಗಳಲ್ಲಿ ಸಂಗ್ರಹಗೊಂಡು, ವಾಹನ ಚಾಲಕರಿಗೆ ಅವುಗಳ ಆಳವನ್ನು ಅಂದಾಜು ಮಾಡಲು ಕಷ್ಟವಾಗುತ್ತಿದೆ. ಇದರಿಂದ ಅಪಘಾತವಾಗುವ ಸಾಧ್ಯತೆ ಹೆಚ್ಚುತ್ತಿದೆ. ಅನೇಕ ದ್ವಿಚಕ್ರ ವಾಹನ ಸವಾರರು ಬೀಳದಂತೆ ಅಥವಾ ತಮ್ಮ ವಾಹನಗಳಿಗೆ ಹಾನಿಯಾಗದಂತೆ ಎಚ್ಚರಿಕೆಯಿಂದ ಓಡಿಸುವುದನ್ನು ಕಾಣಬಹುದು. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗಿ, ಪೀಕ್ ಅವರ್ಗಳಲ್ಲಿ ಆಗಾಗ್ಗೆ ಟ್ರಾಫಿಕ್ ಜಾಮ್ಗಳು ಉಂಟಾಗುತ್ತಿವೆ.
ಕಿನ್ನಿಮುಲ್ಕಿಯ ಸ್ವಾಗತ ಗೋಪುರದ ಬಳಿಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಅಂಬಲಪಾಡಿಯಲ್ಲಿ ನಡೆಯುತ್ತಿರುವ ಒಡ್ಡು ನಿರ್ಮಾಣ ಕಾಮಗಾರಿಯಿಂದಾಗಿ ಉಡುಪಿಯ ಕಡೆಗೆ ಹೋಗುವ ವಾಹನ ಸಂಚಾರವನ್ನು ಕಿನ್ನಿಮುಲ್ಕಿ ಮೂಲಕ ತಿರುಗಿಸಲಾಗಿದೆ. ಆದರೆ, ಈ ತಿರುವು ರಸ್ತೆಯು ಇತ್ತೀಚಿನ ಭಾರೀ ಮಳೆ ಮತ್ತು ಹೆಚ್ಚಿದ ಭಾರಿ ವಾಹನ ಸಂಚಾರದ ಪರಿಣಾಮದಿಂದಾಗಿ ಅಸಮ ಮೇಲ್ಮೈ ಮತ್ತು ದೊಡ್ಡ ಗುಂಡಿಗಳು ನಿರ್ಮಾನವಾಗಿದೆ.
ವ್ಯಾಪಾರ, ಪ್ರವಾಸೋದ್ಯಮ ಮತ್ತು ದೈನಂದಿನ ಪ್ರಯಾಣಕ್ಕೆ ಪ್ರಮುಖ ಮಾರ್ಗವಾಗಿರುವ ಉಡುಪಿ ನಗರದ ಮುಖ್ಯ ಪ್ರವೇಶದ್ವಾರದ ಪ್ರಸ್ತುತ ಸ್ಥಿತಿಯು ಉಡುಪಿಯ ಪ್ರತಿಷ್ಠೆಗೆ ಕಪ್ಪು ಚುಕ್ಕೆಯಾಗಿದೆ. ಈ ಹಿಂದೆ ಮಾಡಲಾಗಿದ್ದ ತಾತ್ಕಾಲಿಕ ತೇಪೆ ಕೆಲಸಗಳು ಮಳೆಯಲ್ಲಿ ಕೊಚ್ಚಿ ಹೋಗಿದೆ. ಹೀಗಾಗಿ ವಾಹನಗಳ ಸುಗಮ ಸಂಚಾರ ಮತ್ತು ಸವಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಗರದ ಎಲ್ಲಾ ರಸ್ತೆಗಳ ಗುಣಮಟ್ಟದ ಡಾಂಬರೀಕರಣ ಮತ್ತು ಪುನರ್ನಿರ್ಮಾಣಕ್ಕೆ ತುರ್ತು ಬೇಡಿಕೆಯಿದೆ.
ಜೋಡುಕಟ್ಟೆಯಲ್ಲಿ, ಜಿಲ್ಲಾ ಆಸ್ಪತ್ರೆ ಮತ್ತು ಟಿಎಂಎ ಪೈ ಆಸ್ಪತ್ರೆಯನ್ನು ಸಂಪರ್ಕಿಸುವ ರಸ್ತೆ ಹದಗೆಟ್ಟಿದೆ. ಪ್ರತಿದಿನ ನೂರಾರು ಪ್ರಯಾಣಿಕರು ಮತ್ತು ಆ್ಯಂಬುಲೆನ್ಸ್ಗಳು ಈ ರಸ್ತೆಯನ್ನು ಬಳಸುತ್ತವೆ. ಇತ್ತೀಚೆಗೆ, ಒಬ್ಬ ದ್ವಿಚಕ್ರ ವಾಹನ ಸವಾರ ಆಳವಾದ ಗುಂಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಈ ಘಟನೆಯ ನಂತರ ಡಾಂಬರೀಕರಣದ ಕೆಲಸ ಕೈಗೊಂಡರೂ, ಮಳೆಯಿಂದಾಗಿ ಅದು ಮತ್ತೆ ಹಾಳಾಗಿದೆ. ಹೀಗಾಗಿ ರಸ್ತೆ ಕೆಲಸದ ಗುಣಮಟ್ಟದ ಬಗ್ಗೆ ಕಳವಳ ಹೆಚ್ಚಿಸಿದೆ.
ಉಡುಪಿ ಎವ್ರಿಡೇ ಮಾರ್ಕೆಟ್ ಬಳಿಯ ರಸ್ತೆಯೂ ತೀವ್ರವಾಗಿ ಹಾನಿಗೊಳಗಾಗಿದ್ದು, ಬಹಳ ಸಮಯದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸಾವಿರಾರು ಪ್ರಯಾಣಿಕರು ವಿವಿಧ ಉದ್ದೇಶಗಳಿಗಾಗಿ ಈ ರಸ್ತೆಯನ್ನು ಬಳಸುತ್ತಿದ್ದರೂ, ಯಾವುದೇ ಶಾಶ್ವತ ಕ್ರಮಗಳನ್ನು ಕೈಗೊಂಡಿಲ್ಲ.
ನಗರದ ಹೃದಯಭಾಗದಲ್ಲಿರುವ ಕಲ್ಸಂಕ ಜಂಕ್ಷನ್ನಲ್ಲಿನ ಉಚಿತ ಎಡ ತಿರುವು ಸಂಪೂರ್ಣವಾಗಿ ಹಾಳಾಗಿದೆ. ವಾರಾಂತ್ಯಗಳಲ್ಲಿ, ಜಂಕ್ಷನ್ನಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು ಸಂಚಾರ ಮಾರ್ಗ ಬದಲಾವಣೆಗಳನ್ನು ಜಾರಿಗೊಳಿಸಲಾಗುತ್ತದೆ. ಮಾರ್ಗ ಬದಲಾವಣೆ ಯೋಜನೆಯ ಪ್ರಕಾರ, ಕಲ್ಸಂಕ ಜಂಕ್ಷನ್ ಮುಚ್ಚಿರುತ್ತದೆ ಮತ್ತು ಮಣಿಪಾಲ್ ಕಡೆಗೆ ಹೋಗುವ ವಾಹನಗಳು ಉಡುಪಿ ಸಿಟಿ ಸ್ಟಾಪ್ನಲ್ಲಿ ತಿರುಗಬೇಕು. ಆದರೆ ಉಡುಪಿಗೆ ಪ್ರಯಾಣಿಸುವವರು ಕಡಿಯಾಳಿಯಲ್ಲಿ ತಿರುಗಬೇಕು. ಗುಂಡಿಬೈಲ್ನಿಂದ ಉಡುಪಿ ಅಥವಾ ಮಣಿಪಾಲ್ ಕಡೆಗೆ ಬರುವ ವಾಹನಗಳು ಎಡ ತಿರುವನ್ನು ಬಳಸಬೇಕಾಗುತ್ತದೆ. ಆದಾಗ್ಯೂ, ಈ ರಸ್ತೆಯ ಕೆಟ್ಟ ಸ್ಥಿತಿಯು ವಾಹನಗಳು ಹಾದುಹೋಗಲು ಅತ್ಯಂತ ಕಷ್ಟಕರವಾಗಿದ್ದು, ವಾರಾಂತ್ಯಗಳ ಪೀಕ್ ಅವರ್ಗಳಲ್ಲಿ ತೀವ್ರ ಟ್ರಾಫಿಕ್ ಜಾಮ್ಗಳಿಗೆ ಕಾರಣವಾಗುತ್ತಿದೆ.
"ಉಡುಪಿ ನಗರಸಭೆಯ ವ್ಯಾಪ್ತಿಯಲ್ಲಿರುವ ಎಲ್ಲಾ ರಸ್ತೆಗಳು ಗುಂಡಿಗಳಿಂದ ತುಂಬಿವೆ. ಡಾಂಬರೀಕರಣ ಮಾಡಿ ಆರು ತಿಂಗಳು ಸಹ ಕಳೆದಿಲ್ಲ. ಆದರೆ ಹೊಸದಾಗಿ ನಿರ್ಮಿಸಿದ ರಸ್ತೆಗಳು ಈಗಾಗಲೇ ಹಾಳಾಗಿವೆ. ಹಳೆಯ ಟಾರ್ ಇನ್ನೂ ಕಾಣುತ್ತಿದೆ, ಆದರೆ ಹೊಸದು ಕಾಣಿಸುತ್ತಿಲ್ಲ. ಕಾಂಕ್ರೀಟ್ ರಸ್ತೆಗಳಲ್ಲಿಯೂ ಗುಂಡಿಗಳಿವೆ, ಇದರಿಂದ ಪ್ರಯಾಣಿಕರಿಗೆ, ವಿಶೇಷವಾಗಿ ರಾತ್ರಿ ಸಂಚರಿಸುವ ಸವಾರರಿಗೆ ಕಷ್ಟವಾಗುತ್ತದೆ. ಆಯುಕ್ತರು, ಅಧ್ಯಕ್ಷರು ಮತ್ತು ಇತರ ಅಧಿಕಾರಿಗಳು ಇದೇ ರಸ್ತೆಗಳಲ್ಲಿ ಪ್ರಯಾಣಿಸುತ್ತಾರೆ, ಆದರೆ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ. ಎಲ್ಲಾ 32 ವಾರ್ಡ್ ಸದಸ್ಯರು ಈ ವಿಷಯವನ್ನು ಸಿಎಂಸಿ ಗಮನಕ್ಕೆ ತಂದು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾವು ಪ್ರತಿಭಟನೆ ನಡೆಸುತ್ತೇವೆ. ಈ ಹಿಂದೆ, ರಸ್ತೆ ಕಾಮಗಾರಿಗಳು 100 ಪ್ರತಿಶತ ಗುಣಮಟ್ಟದಿಂದ ಕೂಡಿರುತ್ತಿದ್ದವು, ಆದರೆ ಈಗ ಅದು 60-40 ರಂತಾಗಿದೆ - ಕೇವಲ 40 ಪ್ರತಿಶತ ಕೆಲಸ ಮಾತ್ರ ಸರಿಯಾಗಿ ಮಾಡಲಾಗುತ್ತದೆ, ಉಳಿದ 60 ಪ್ರತಿಶತ ಕಮಿಷನ್ಗೆ ಹೋಗುತ್ತದೆ. ಇಡೀ ಕೆಲಸವನ್ನು ಸರಿಯಾಗಿ ನಡೆಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಕೆಲಸದ ಸ್ಥಳಗಳಲ್ಲಿ ಹಾಜರಿರಬೇಕು. ಅವರು ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಳ್ಳಬಾರದು ಮತ್ತು ವ್ಯವಸ್ಥಿತ ಹಾಗೂ ಗುಣಮಟ್ಟದ ಕೆಲಸವನ್ನು ಕೈಗೊಳ್ಳಬೇಕು" ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.
"ನಮಗೆ ಸಾರ್ವಜನಿಕರಿಂದ ಪತ್ರಗಳು ಬಂದಿವೆ, ಮತ್ತು ಸದಸ್ಯರು ಸಹ ಗುಂಡಿಗಳ ಸಮಸ್ಯೆಯನ್ನು ನನ್ನ ಗಮನಕ್ಕೆ ತಂದಿದ್ದಾರೆ. ಮಳೆ ಕಡಿಮೆಯಾದ ನಂತರ, ಜನರಿಗೆ ಯಾವುದೇ ಅನಾನುಕೂಲವಾಗದಂತೆ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ನಗರಸಭೆ ಆಯುಕ್ತ ಮಹಂತೇಶ್ ಹಂಗರಗಿ ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಮತ್ತು ಬ್ರಹ್ಮಗಿರಿ, ಅಜ್ಜರಕಾಡು, ಬೀಡಿನಗುಡ್ಡೆ ಸೇರಿದಂತೆ ನಗರದೊಳಗಿನ ಹಲವು ರಸ್ತೆಗಳು ಜಿಲ್ಲೆಯಾದ್ಯಂತ ತೀವ್ರವಾಗಿ ಹಾನಿಗೊಳಗಾಗಿವೆ. ಮಳೆಗಾಲ ಮುಂದುವರಿದು ರಸ್ತೆಗಳು ಮತ್ತಷ್ಟು ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ಯಾವುದೇ ದೊಡ್ಡ ಅಪಘಾತಗಳು ಸಂಭವಿಸುವ ಮೊದಲು ಉಡುಪಿ ನಗರಸಭೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ನಾಗರಿಕರು ಮನವಿ ಮಾಡಿದ್ದಾರೆ.