ಬೈಂದೂರು, ಆ. 04 (DaijiworldNews/AA): ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆ ದೋಣಿ ಮಗುಚಿಬಿದ್ದಿದ್ದು, ಅದೃಷ್ಟವಶಾತ್ ಲೈಫ್ ಜಾಕೆಟ್ ಧರಿಸಿದ್ದರಿಂದ ಅದರಲ್ಲಿದ್ದ ಒಂಬತ್ತು ಮೀನುಗಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಬೈಂದೂರಿನ ಉಪ್ಪುಂದದಲ್ಲಿ ಭಾನುವಾರ ಸಂಭವಿಸಿದೆ.



ಶಾರದಾ ಅವರಿಗೆ ಸೇರಿದ ಮೀನುಗಾರಿಕೆ ದೋಣಿಯಲ್ಲಿ ಒಂಬತ್ತು ಮಂದಿ ಮೀನುಗಾರರು ಉಪ್ಪುಂದ ಗ್ರಾಮದ ಮಡಿಕಲ್ ಕಡಲ ತೀರದಲ್ಲಿ ಸಮುದ್ರಕ್ಕೆ ತೆರಳುತ್ತಿದ್ದರು. ಈ ವೇಳೆ ಬೃಹತ್ ಅಲೆಗಳು ದೋಣಿಗೆ ಅಪ್ಪಳಿಸಿತು. ಪರಿಣಾಮ ದೋಣಿ ಮಗುಚಿ ಬಿದ್ದು ಅದರಲ್ಲಿದ್ದವರೆಲ್ಲರೂ ಸಮುದ್ರಕ್ಕೆ ಬಿದ್ದರು. ಆದರೆ ಅವರೆಲ್ಲರೂ ಲೈಫ್ ಜಾಕೆಟ್ ಧರಿಸಿದ್ದರಿಂದ ನೀರಿನಲ್ಲಿ ಈಜುತ್ತಾ ಸುರಕ್ಷಿತವಾಗಿ ದಡ ಸೇರಿದರು.
ಪಾರಾದ ಮೀನುಗಾರರನ್ನು ಪ್ರಜ್ವಲ್ ಖಾರ್ವಿ, ಪ್ರಮೋದ್ ಖಾರ್ವಿ, ಗೌತಮ್ ಖಾರ್ವಿ, ಭಾಸ್ಕರ್ ಖಾರ್ವಿ, ಯೋಗಿರಾಜ್ ಖಾರ್ವಿ, ಗೋವಿಂದ ಖಾರ್ವಿ, ಬಾಬು ಖಾರ್ವಿ ಮತ್ತು ದೀಪಕ್ ಖಾರ್ವಿ ಎಂದು ಗುರುತಿಸಲಾಗಿದೆ. ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಹಗ್ಗ ಮತ್ತು ಮತ್ತೊಂದು ದೋಣಿಯ ಸಹಾಯದಿಂದ ಮಗುಚಿ ಬಿದ್ದ ದೋಣಿಯನ್ನು ಸಮುದ್ರ ಪಾಲಾಗದಂತೆ ತಡೆದು, ದಡಕ್ಕೆ ಎಳೆದು ತಂದಿದ್ದಾರೆ.
ಬೃಹತ್ ಅಲೆಗಳ ರಭಸಕ್ಕೆ ದೋಣಿಯ ಇಂಜಿನ್ ಮತ್ತು ಅದರ ರಚನೆಗೆ ಹಾನಿಯಾಗಿದೆ. ದೋಣಿಯಲ್ಲಿದ್ದ ಮೀನುಗಾರಿಕೆ ಬಲೆಗಳು ಸಮುದ್ರ ಪಾಲಾಗಿದ್ದು, ಸುಮಾರು 5.5 ಲಕ್ಷ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಉಪ್ಪುಂದ ಮಡಿಕಲ್ ತೀರದಿಂದ ಸುಮಾರು 10 ಮೈಲುಗಳಷ್ಟು ಸಾಗುವ ಹೊತ್ತಿನಲ್ಲಿ ಬೃಹತ್ ಅಲೆ ಅಪ್ಪಳಿಸಿ ಈ ಅಪಘಾತ ಸಂಭವಿಸಿದೆ. ಅಲೆಗಳ ತೀವ್ರ ಹೆಚ್ಚಳ, ಗಾಳಿಯ ಒತ್ತಡ, ನೀರಿನ ರಭಸದ ಬಗ್ಗೆ ಅನುಮಾನ ಉಂಟಾದ ಹಿನ್ನಲೆ ಮೀನುಗಾರರಿಗೆ ಆರಂಭದಲ್ಲೇ ಲೈಫ್ ಜಾಕೆಟ್ ಧರಿಸಲು ಸೂಚನೆ ನೀಡಲಾಗಿತ್ತು. ಮೀನುಗಾಗರೆಲ್ಲರೂ ಲೈಫ್ ಜಾಕೆಟ್ ಧರಿಸಿದ ಹಿನ್ನೆಲೆ ಎಲ್ಲಾ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.