ಮಂಗಳೂರು, ಆ. 11 (DaijiworldNews/AK): ಕಡಬ ಪಟ್ಟಣ ಪಂಚಾಯತ್ನಲ್ಲಿ ಆಗಸ್ಟ್ 17 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಚುನಾವಣೆಯ ಅವಧಿಯಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಅವಶ್ಯವೆಂದು ಕಂಡುಬರುವ ಜಿಲ್ಲೆಯ ಎಲ್ಲಾ ಪರವಾನಿಗೆದಾರರು (ಪೊಲೀಸ್ ಕಮೀಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ) ಅವರ ಪರವಾನಿಗೆಯಲ್ಲಿ ಹೊಂದಿರುವ ಆಯುಧಗಳನ್ನು ಠೇವಣಿ ಇರಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಕಡಬ ಪಟ್ಟಣ ಪಂಚಾಯತ್ ಸಾರ್ವತ್ರಿಕ ಚುನಾವಣೆ ವಾರ್ಡ್ ವ್ಯಾಪ್ತಿಯಲ್ಲಿ ಬೆಳೆರಕ್ಷಣೆಗಾಗಿ ಮತ್ತು ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವ ಎಲ್ಲಾ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಠೇವಣಿಯಲ್ಲಿರಿಸುವುದು ಅವಶ್ಯವೆಂದು ಮನಗಂಡು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶಿಸಿದ್ದಾರೆ.
ಪರವಾನಿಗೆದಾರರಿಗೆ ಬೆಳೆ/ ಆತ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರದ ತೀರಾ ಅವಶ್ಯಕತೆ ಇದೆ ಎಂದಾದಲ್ಲಿ ಮಾತ್ರ ಸಂಬಂಧಪಟ್ಟವರು, ಪೂರಕ ದಾಖಲೆಗಳೊಂದಿಗೆ ಸಮಿತಿಗಳಿಗೆ ಅಹವಾಲುಗಳನ್ನು ಸಲ್ಲಿಸಬೇಕು. ಸ್ಕ್ರೀನಿಂಗ್ ಸಮಿತಿಯು ಅರ್ಹ ಪ್ರಕರಣಗಳಲ್ಲಿ ಶಸ್ತ್ರಾಸ್ತ್ರವನ್ನು ಠೇವಣಿ ಇಡುವುದರಿಂದ ವಿನಾಯಿತಿ ನೀಡಲು ಅಧಿಕಾರವನ್ನು ನೀಡಲಾಗಿದೆ.
ಅಮಾನತಿನ ಅವಧಿ ಮುಗಿದ ತಕ್ಷಣ ಆಯುಧ ಠೇವಣಿ ಪಡೆದ ಪೊಲೀಸ್ ಅಧಿಕಾರಿಗಳು/ಡೀಲರ್ಸ್ಗಳು ಅಂತಹ ಆಯುಧಗಳನ್ನು ಠೇವಣಿದಾರರಿಗೆ ಆಗಸ್ಟ್ 30 ರ ನಂತರ ಹಿಂತಿರುಗಿಸಬೇಕು. ಈ ಆದೇಶವು ಸರ್ಕಾರಿ ಕರ್ತವ್ಯದಲ್ಲಿ ನಿರತರಾದ ರಕ್ಷಣಾ ಸಿಬ್ಬಂದಿಗಳಿಗೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಭದ್ರತಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಮದ್ಯ ಮಾರಾಟ ನಿಷೇಧ
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ 13 ವಾರ್ಡ್ಗಳ 13 ಮತಗಟ್ಟೆಗಳಲ್ಲಿ ಮತದಾನವು ನಡೆಯಲಿದೆ. ಮತದಾನ ಕಾರ್ಯವು ಸುಗಮವಾಗಿ, ಶಾಂತಿಯುತವಾಗಿ ನಡೆಯುವ ಸಲುವಾಗಿ ಹಾಗೂ ಚುನಾವಣಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಆಗಸ್ಟ್ 15 ಸಂಜೆ 5 ಗಂಟೆಯಿಂದ ಆಗಸ್ಟ್ 17 ರ ರಾತ್ರಿ 12 ಗಂಟೆಯವರೆಗೆ ಈ ಅವಧಿಯನ್ನು "ಶುಷ್ಕ ದಿನ” ಎಂದು ಘೋಷಿಸಿ ಈ ಸಂದರ್ಭದಲ್ಲಿ ಎಲ್ಲಾ ವಿಧದ ಮದ್ಯದಂಗಡಿಗಳನ್ನು, ಮದ್ಯ ತಯಾರಿಕಾ ಘಟಕಗಳನ್ನು, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಎಲ್ಲಾ ವಿಧದ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶಿಸಿದ್ದಾರೆ.