ಉಡುಪಿ, ಆ. 11 (DaijiworldNews/AK): ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಉಡುಪಿ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಸಹಭಾಗಿತ್ವದಲ್ಲಿ ಸುಮಾರು 2.5 ಕೋಟಿ ರೂ ವೆಚ್ಚದಲ್ಲಿ ಜಿಲ್ಲೆಯ ಒಟ್ಟು 207 ಜಂಕ್ಷನ್ಗಳಲ್ಲಿ 601 ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಮಹತ್ವಾಕಾಂಕ್ಷೆಯ ಯೋಜನೆ ಯನ್ನು ಹಮ್ಮಿಕೊಂಡಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.





ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಆರಂಭಿಕ ಹಂತದಲ್ಲಿ ಕ್ಯಾಮೆರಾಗಳನ್ನು ಗಡಿ ಪ್ರದೇಶಗಳು, ಕೋಮು ಗಲಭೆಗಳಿಗೆ ಗುರಿಯಾಗುವ ಸ್ಥಳಗಳು ಮತ್ತು ಪ್ರಮುಖ ಸ್ಥಳಗಳಾದ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ- ಮಾಳ, ಹೊಸ್ಮಾರ್, ಸಚ್ಚರಿಪೇಟೆ, ಕಾರ್ಕಳ ಪಟ್ಟಣ ವ್ಯಾಪ್ತಿಯ - ಸಾಣೂರು, ಹೆಬ್ರಿ ವ್ಯಾಪ್ತಿಯ - ಸೋಮೇಶ್ವರ, ಅಮಸ್ಬೈಲ್ ವ್ಯಾಪ್ತಿಯ - ಹೊಸಂಗಡಿ, ಕೊಲ್ಲೂರು ವ್ಯಾಪ್ತಿಯ - ಡಾಲಿ, ಗಂಗೊಳ್ಳಿ ವ್ಯಾಪ್ತಿಯ - ಮೆಲ್ ಗಂಗೊಳ್ಳಿ, ಮಲ್ಪೆ ವ್ಯಾಪ್ತಿಯ - ಮಲ್ಪೆ ಬೀಚ್, ಮತ್ತು ಉಡುಪಿ ವ್ಯಾಪ್ತಿಯ - ಸಿಟಿ ಬಸ್ ನಿಲ್ದಾಣ ಮುಂತಾದ ಸೂಕ್ಷ್ಮ ಸ್ಥಳಗಳಲ್ಲಿ ಅಳವಡಿಸಲಾಗುವುದು ಎಂದು ಅವರು ಹೇಳಿದರು.
ಹೆಚ್ಚುವರಿಯಾಗಿ, ಉಡುಪಿ ನಗರಸಭಾ ವ್ಯಾಪ್ತಿಯ ಕಲ್ಸಂಕ ಜಂಕ್ಷನ್, ಕರಾವಳಿ ಜಂಕ್ಷನ್, ಇಂದ್ರಾಳಿ ಸೇತುವೆ, ಸಂತೆಕಟ್ಟೆ ಜಂಕ್ಷನ್, ಸರ್ವಿಸ್ ಬಸ್ ನಿಲ್ದಾಣ, ಹಳೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ; ಕುಂದಾಪುರ ಉಪವಿಭಾಗ - ಎಂ ಕೋಡಿ ಜಂಕ್ಷನ್, ಕಂಡ್ಲೂರು ಮಾರುಕಟ್ಟೆ; ಮತ್ತು ಕಾರ್ಕಳ ಉಪವಿಭಾಗ - ಬರಡಿ, ನಾರಾವಿಗಳಲ್ಲಿ 10 ಉತ್ತಮ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಈ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಆಯಾ ಸ್ಥಳೀಯ ಪೊಲೀಸ್ ಠಾಣೆಗಳು ಹಾಗೂ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ದಿನದ 24 ಗಂಟೆಗಳೂ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದರು.
ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮದ ಭಾಗವಾಗಿ, ಉಡುಪಿ ಜಿಲ್ಲಾ ಪೊಲೀಸರು "ದೃಷ್ಟಿ ಯೋಜನೆ"ಯನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಆಯ್ದ ಪಟ್ಟಣಗಳು ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು, ರಾತ್ರಿ ಗಸ್ತು ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದು ಕಳ್ಳತನ, ಮಹಿಳೆಯರ ಮೇಲಿನ ಅಪರಾಧಗಳು ಮತ್ತು ಮಾದಕ ವ್ಯಸನಿಗಳಿಂದ ಮಾಡಲಾಗುವ ಅಪರಾಧಗಳನ್ನು ತಡೆಯುವ ಗುರಿಯನ್ನು ಹೊಂದಿದೆ, ಜೊತೆಗೆ ವಾಣಿಜ್ಯ ಸಂಸ್ಥೆಗಳು, ಒಂಟಿ ಮನೆ ನಿವಾಸಿಗಳು ಮತ್ತು ಹಿರಿಯ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಎಂದರು.
ಈ ಯೋಜನೆಯಡಿಯಲ್ಲಿ, ನೇಮಕಗೊಂಡ ಭದ್ರತಾ ಸಿಬ್ಬಂದಿ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ತಮಗೆ ನಿಯೋಜಿಸಲಾದ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಾರೆ. ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಥವಾ ಘಟನೆ ಕಂಡುಬಂದರೆ, ಅವರು ತಕ್ಷಣ ಬೀಟ್ ಪೊಲೀಸರಿಗೆ ಅಥವಾ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು. ಈ ಭದ್ರತಾ ಸಿಬ್ಬಂದಿಗೆ ಸಂಭಾವನೆಯನ್ನು ಸಿಬ್ಬಂದಿ ನಿಯೋಜಿಸಲಾಗಿರುವ ಆಯಾ ಪ್ರದೇಶದ ನಿವಾಸಿಗಳು ಭರಿಸುತ್ತಾರೆ ಎಂದು ತಿಳಿಸಿದರು.
ಪ್ರಸ್ತುತ, ದೃಷ್ಟಿ ಯೋಜನೆಯನ್ನು 12 ಸ್ಥಳಗಳಲ್ಲಿ ಪ್ರಾರಂಭಿಸಲಾಗಿದೆ - ಉಡುಪಿ ನಗರ, ಶಿರ್ವ ಮತ್ತು ಗಂಗೊಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಲಾ ಎರಡು ಮತ್ತು ಕುಂದಾಪುರ, ಹೆಬ್ರಿ, ಕಾರ್ಕಳ ಪಟ್ಟಣ, ಹಿರಿಯಡ್ಕ, ಶಂಕರನಾರಾಯಣ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಲಾ ಒಂದು. ಮುಂದಿನ ದಿನಗಳಲ್ಲಿ ಇದನ್ನು ಜಿಲ್ಲೆಯಾದ್ಯಂತ ಇನ್ನೂ 21 ಸ್ಥಳಗಳಿಗೆ ವಿಸ್ತರಿಸಲಾಗುವುದು ಎಂದು ವಿವರಿಸಿದರು.