ಉಡುಪಿ, ಆ. 13 (DaijiworldNews/AA): ಅಜ್ಜರಕಾಡಿನ ನಿರ್ಮಾಣ ಹಂತದ ಸರ್ಕಾರಿ ಆಸ್ಪತ್ರೆ ಕಟ್ಟಡದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ತಾಮ್ರದ ಪೈಪ್ ಮತ್ತು ಫಿಟ್ಟಿಂಗ್ಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


ಪೊಲೀಸರ ಪ್ರಕಾರ, ಆಮ್ಲಜನಕ ಪೈಪ್ಲೈನ್ ಅಳವಡಿಕೆಗಾಗಿ ದಾಸ್ತಾನು ಕೋಣೆಯಲ್ಲಿ ಇರಿಸಲಾಗಿದ್ದ ತಾಮ್ರದ ಪೈಪ್ಗಳು, ಫಿಟ್ಟಿಂಗ್ಗಳು ಮತ್ತು ಹಳೆಯ ತಾಮ್ರದ ಪಟ್ಟಿಗಳು ಕಾಣೆಯಾಗಿವೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಜುಲೈ 20 ರಂದು, ಲಿಯಾಕತ್ ಎಂಬಾತನು ಮತ್ತೊಬ್ಬ ಸಹಚರನೊಂದಿಗೆ ಸುಮಾರು 8 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಹೋಗಿರುವುದು ಕಂಡುಬಂದಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಖಚಿತ ಮಾಹಿತಿ ಮೇರೆಗೆ, ಉಡುಪಿ ನಗರ ಠಾಣಾ ಇನ್ಸ್ಪೆಕ್ಟರ್ ಮಂಜುನಾಥ್ ವಿ. ಬಡಿಗೇರ್ ನೇತೃತ್ವದ ವಿಶೇಷ ಪೊಲೀಸ್ ತಂಡವು ಆಗಸ್ಟ್ 12 ರಂದು ಶಿವಮೊಗ್ಗ ನಗರದಲ್ಲಿ ಆರೋಪಿಗಳನ್ನು ಬಂಧಿಸಿದೆ. ಬಂಧಿತರನ್ನು ಬೆಂಗಳೂರಿನ ವಿದ್ಯಾನಗರ ನಿವಾಸಿ ಮೊಹಮ್ಮದ್ ಜಾವೇದ್ (29) ಮತ್ತು ತುಮಕೂರು ಜಿಲ್ಲೆಯ ಶಿರಾ ಪಟ್ಟಣದ ಪಾರ್ಕ್ ಮೊಹಲ್ಲಾದ ಸೈಯದ್ ದಾದಾ ಪೀರ್ ಯಾನೆ ಲಿಯಾಕತ್ (28) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 2,81,000 ರೂ. ಮೌಲ್ಯದ ಕಳುವಾದ ತಾಮ್ರದ ಪೈಪ್ ತುಂಡುಗಳು, ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಮತ್ತು ಎಕ್ಸೆಲ್ ಪ್ರೇಮ್ ಮೊಪೆಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಒಟ್ಟು ಆಸ್ತಿಯ ಮೌಲ್ಯ ಸುಮಾರು 6,31,500 ರೂ. ಎಂದು ಅಂದಾಜಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ನಿರ್ದೇಶನ, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್ ಮತ್ತು ಡಿವೈಎಸ್ಪಿ ಡಿ.ಟಿ. ಪ್ರಭು ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ. ಇನ್ಸ್ಪೆಕ್ಟರ್ ಮಂಜುನಾಥ್ ವಿ. ಬಡಿಗೇರ್, ಪಿಎಸ್ಐಗಳಾದ ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ, ನಾರಾಯಣ ಬಿ. ಗೋಪಾಲಕೃಷ್ಣ ಮತ್ತು ಸಿಬ್ಬಂದಿಯಾದ ಪ್ರಸನ್ನ ಸಿ., ಸಂತೋಷ್ ಶೆಟ್ಟಿ, ಆನಂದ್, ಸಂತೋಷ್ ರಾಥೋಡ್, ಶಿವು ಕುಮಾರ್, ಹೇಮಂತ್ ಕುಮಾರ್, ಹಾಗೂ ತಾಂತ್ರಿಕ ತಂಡದ ದಿನೇಶ್ ಮತ್ತು ನಿತಿನ್ ಕುಮಾರ್ ಅವರ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಸಲಾಯಿತು.