ಕಾಸರಗೋಡು, ಆ.17 (Daijiworld News/TA): ಮೀಂಜಾ ಗ್ರಾಮದ ಚಿಗುರುಪಾದೆ ಕೊರಗ ತನಿಯ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜ ಆದಿ ಕ್ಷೇತ್ರಕ್ಕೆ ಭಕ್ತರು ಕೈಗೊಂಡ ಪವಿತ್ರ ಪಾದಯಾತ್ರೆ ಶ್ರದ್ಧಾ ಭಾವದಿಂದ ನೆರವೇರಿತು. ಈ ವೇಳೆ ಶ್ವಾನವೊಂದು ಚಿಗುರುಪಾದೆಯಿಂದಲೇ ಹೆಜ್ಜೆ ಹಾಕಿ, ಕುತ್ತಾರು ಕೊರಗ ತನಿಯ ಆದಿಯ ವರೆಗೆ ಭಕ್ತರೊಂದಿಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು.

ಶನಿವಾರ ಬೆಳಿಗ್ಗೆ 6 ಗಂಟೆಗೆ ಆರಂಭವಾದ ಪಾದಯಾತ್ರೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ಕೊರಗಜ್ಜನ ಕೃಪೆಗೆ ಪಾತ್ರರಾದರು. ಹಿರಿಯರು ಕಿರಿಯರು ಮಹಿಳೆಯರೆನ್ನದೆ ಈ ಪವಿತ್ರ ಪಾದಯಾತ್ರೆಯಲ್ಲಿ ಊರ ಪರವೂರ ಭಕ್ತರು ಭಾಗವಹಿಸಿದ್ದರು. ಆರೋಗ್ಯ ಸುಖ ಶಾಂತಿ ಕರುಣಿಸಲಿ ಎಂಬ ಪ್ರಾರ್ಥನೆಯೊಂದಿಗೆ ಯಾತ್ರೆ ನಡೆಯಿತು. ಯಾತ್ರೆಯಲ್ಲಿ ಒಂದು ಶ್ವಾನವೂ ಭಕ್ತರಿಗೆ ಸಾಥ್ ನೀಡಿದ್ದು ತುಳುನಾಡಿನ ಶಕ್ತಿಗೆ ಭಕ್ತಿಯ ಪ್ರತೀಕದಂತಿತ್ತು.