ಉಡುಪಿ ಆ.18 (Daijiworld News/AK): ಉಡುಪಿ ಜಿಲ್ಲೆಯಲ್ಲಿ ಮಳೆಯ ಅರ್ಭಟದಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ & ಪ್ರೌಢ ಶಾಲೆ, ಸರ್ಕಾರಿ ಅನುದಾನಿತ ಮತ್ತು ಐಟಿಐ ಖಾಸಗಿ ವಿದ್ಯಾಸಂಸ್ಥೆಗಳಿಗೆ ಇಂದು ಆ.18ರಂದು ರಜೆ ಘೋಷಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ರವರ ಮುನ್ಸೂಚನೆಯಂತೆ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತ ಬೀಸುವ ಸಾಧ್ಯತೆ ಇದ್ದು, ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್ 24 ರವರೆಗೆ ರೆಡ್ ಅಲರ್ಟ್ ಘೋಷಣೆ ಇರುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ, ನಿವಾಸಿಗಳು ಮತ್ತು ಪ್ರವಾಸಿಗರು ಇಬ್ಬರೂ ಕಡಲತೀರಗಳು, ನದಿಗಳು ಮತ್ತು ಜಲಪಾತಗಳ ಬಳಿಗೆ ಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ಈ ಪ್ರದೇಶಗಳಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳದಂತೆ ಸೂಚಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತುರ್ತು ಕ್ರಮಗಳನ್ನು ಕೈಗೊಂಡಿದೆ.