ಬಂಟ್ವಾಳ ,ಆ.18 (Daijiworld News/AK): ಕಾರು ಖರೀದಿಗೆಂದು ತಂದ ತನ್ನ ಹಣ ಕಳವಾಗಿದೆ ಎಂದು ವ್ಯಕ್ತಿಯೊಬ್ಬರು ಎರಡು ದಿನಗಳ ಬಳಿಕ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ ಘಟನೆ ಭಾನುವಾರ ನಡೆದಿದೆ.

ಕುಂದಾಪುರ ನಿವಾಸಿ ರಂಗನಾಥ ಎಂಬವರ ತನ್ನ ಕಿಸೆಯಿಂದ 50 ಸಾವಿರ ಹಣದ ಎರಡು ಕಟ್ಟುಗಳು ಕಳವಾಗಿದೆ ಎಂದು ಅವರು ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅವರ ಬಳಿಯಿದ್ದ ಕಾರೊಂದನ್ನು ಮಾರಾಟ ಮಾಡಿ ಬಂದಿದ್ದ 1,60,000 ನಗದು ಹಣವನ್ನು ರೂ. 50 ಸಾವಿರದಂತೆ ಮೂರು ಕಟ್ಟುಗಳನ್ನು ಹಾಗೂ ರೂ.10 ಸಾವಿರದ ಒಂದು ಕಟ್ಟು ನ್ನು ಮಾಡಿ ಕಿಸೆಯಲ್ಲಿ ಇಟ್ಟುಕೊಂಡು ಬಿಸಿರೋಡಿನ ಕೈಕಂಬದ ಶಾಂತಿ ಅಂಗಡಿಗೆ ಕಾರು ಖರೀದಿ ಮಾಡಲು ಬಂದಿದ್ದರು.
ಖರೀದಿ ಮಾಡುವ ಕಾರಿನ ದಾಖಲಾತಿಗಳು ಸರಿಯಿಲ್ಲದ ಕಾರಣ ಅವರು ಕೈಕಂಬದಲ್ಲಿ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡು ಅ.15 ರ ಬೆಳಿಗ್ಗೆ ಕೊಟ್ಟಿಗೆಹಾರಕ್ಕೆ ಹೋಗುವ ಉದ್ದೇಶದಿಂದ ಬಿ.ಸಿ.ರೋಡಿನ ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತಿದ್ದು, ಬಸ್ ಬಂದ ಬಳಿಕ ಬಸ್ಸು ಹತ್ತಿ ಕಿಸೆಗೆ ಕೈ ಹಾಕಿ ನೋಡಿದಾಗ ರೂ.50 ಸಾವಿರದ ಮೂರು ಕಟ್ಟುಗಳ ಪೈಕಿ ಎರಡು ಕಟ್ಟುಗಳು ಅಂದರೆ ರೂ.ಒಂದು ಲಕ್ಷ ನಗದು ಹಣ ಕಳವಾಗಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಅವರು ದೂರು ನೀಡಿದ್ದು, ಪೋಲೀಸರು ಇಲ್ಲಿನ ಸಿ.ಸಿ.ಕ್ಯಾಮರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.