ಮಂಗಳೂರು,ಆ. 19 (DaijiworldNews/TA): ಕೇರಳ ಮೂಲದ ವ್ಯಾಪಾರಿಯೊಬ್ಬರ ಅಪಹರಣ ಮತ್ತು ಚಿನ್ನ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 18 ರಂದು ಪುಣೆಯಲ್ಲಿ ಐದು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಮಹತ್ವದ ಪ್ರಗತಿಯಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಡಿಸಿಪಿ ಮಿಥುನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಡಿಸಿಪಿ ರವಿಶಂಕರ್, ಎಸಿಪಿ ಪ್ರತಾಪ್ ಸಿಂಗ್ ಥೋರಟ್, ಎಸಿಪಿ ವಿಜಯ ಕ್ರಾಂತಿ ಉಪಸ್ಥಿತರಿದ್ದರು.

ಆಗಸ್ಟ್ 16 ರಂದು ಕೇರಳದ ಆಭರಣ ಅಂಗಡಿ ಮಾಲೀಕ ಶ್ರೀಹರಿ ಅವರನ್ನು ಅಪಹರಿಸಿ ಸುಮಾರು 35 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನವನ್ನು ದೋಚಲಾಯಿತು. ಶ್ರೀಹರಿ ರೈಲಿನಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬಂದು ಕೈರಲಿ ಹೋಟೆಲ್ ಬಳಿ ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದಾಗ, ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಇನ್ನೋವಾ ಕಾರಿನಲ್ಲಿ ಬಂದ ಗುಂಪೊಂದು ಅವರ ಬಳಿಗೆ ಬಂದು ತರಾಟೆ ಮಾಡಿತ್ತು. ಅವರು ವಿರೋಧಿಸಿದಾಗ, ಅವರನ್ನು ಬಲವಂತವಾಗಿ ಕಾರಿನೊಳಗೆ ತಳ್ಳಿದರು. ಆ ತಂಡವು ಅವರನ್ನು ಉಡುಪಿ ಮೂಲಕ ಕುಮಟಾ–ಶಿರಸಿ ಕಡೆಗೆ ಕರೆದೊಯ್ದು, ಅಲ್ಲಿ ಚಿನ್ನವನ್ನು ದೋಚಿ ಶಿರಸಿಯ ಅಂತ್ರವಳ್ಳಿ ಗ್ರಾಮದಲ್ಲಿ ಬಿಟ್ಟು ಹೋಗಿದ್ದರು. ನಂತರ ಶ್ರೀಹರಿ ಮಂಗಳೂರಿಗೆ ಹಿಂತಿರುಗಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಶ್ರೀಹರಿಯ ಚಲನವಲನಗಳ ಬಗ್ಗೆ ಅಪರಾಧಿಗಳಿಗೆ ತಿಳಿದಿದ್ದಂತೆ ಕಂಡುಬಂದಿದ್ದರಿಂದ ಪೊಲೀಸರು ಆಂತರಿಕ ಕೈವಾಡವನ್ನು ಶಂಕಿಸಿದ್ದರು. ಈ ಗ್ಯಾಂಗ್ ಬಿಎಚ್ ನೋಂದಣಿ ವಾಹನವನ್ನು ಸಹ ಬಳಸಿದ್ದು, ನಂಬರ್ ಪ್ಲೇಟ್ ನಿಜವಾದದ್ದೇ ಅಥವಾ ನಕಲಿಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತ್ವರಿತ ತನಿಖೆಯ ನಂತರ, ಸಿಸಿಬಿ ಪೊಲೀಸ್ ತಂಡವು ಆರೋಪಿಗಳನ್ನು ಪುಣೆಯಲ್ಲಿ ಪತ್ತೆಹಚ್ಚಿ ಆಗಸ್ಟ್ 18 ರಂದು ಬಂಧಿಸಿತು. ಹೆಚ್ಚಿನ ವಿಚಾರಣೆಯಿಂದ ಹಲವು ವಿವರಗಳು ಬಹಿರಂಗಗೊಳ್ಳುವ ನಿರೀಕ್ಷೆಯಿದೆ.