ಕಾರ್ಕಳ, ಆ. 20 (DaijiworldNews/TA): ಸುಂಟರಗಾಳಿ ಮತ್ತು ಅತಿಯಾದ ಮಳೆಯಿಂದ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಆದ ಹಾನಿಗೆ ತುರ್ತು ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ವಿ ಸುನಿಲ್ ಕುಮಾರ್ ಮನವಿ ಮಾಡಿದ್ದಾರೆ.

ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಆಗಸ್ಟ್ 18ರಂದು ಅತಿಯಾದ ಮಳೆ ಹಾಗೂ ಸುಂಟರ ಗಾಳಿಯಿಂದಾಗಿ ಸುಮಾರು ನೂರಕ್ಕೂ ಹೆಚ್ಚಿನ ವಾಸದ ಮನೆಗಳಿಗೆ ಹಾನಿಯಾಗಿದೆ. ಕಾರ್ಕಳ ತಾಲೂಕಿನ ಬೆಳ್ಮಣ್, ಸೂಡ, ನಂದಳಿಕೆ, ರೆಂಜಾಳ, ಬೈಲೂರು, ಕಡ್ತಲ ಹಾಗೂ ಯರ್ಲಪಾಡಿ ಗ್ರಾಮಗಳ ಪರಿಸರದಲ್ಲಿ ಮತ್ತು ಹೆಬ್ರಿ ತಾಲೂಕಿನ ಚಾರ, ಕುಚ್ಚೂರು ಮತ್ತು ಮುದ್ರಾಡಿ ಗ್ರಾಮಗಳ ಪರಿಸರದಲ್ಲಿ ಸುಂಟರಗಾಳಿ ಹಾಗೂ ಅತಿಯಾದ ಮಳೆ ಗಾಳಿಯಿಂದ ಆ ಪ್ರದೇಶದ ಕೃಷಿ ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗಿದೆ.
ತುರ್ತು ಪರಿಹಾರೋಪಾಯಗಳನ್ನು ಒದಗಿಸುವ ಸಲುವಾಗಿ ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್ ರವರು ವಿಧಾನ ಸಭಾ ಅಧಿವೇಶನ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರನ್ನು ಭೇಟಿ ಮನವಿ ಸಲ್ಲಿಸಿದ್ದಾರೆ.