ಬಂಟ್ವಾಳ, ಆ. 20 (DaijiworldNews/TA): ತಾಲೂಕಿನ ಮಣಿನಾಲ್ಕೂರು ಗ್ರಾಮದ ದೇವಸ್ಯಮೂಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯೋರ್ವರನ್ನು ಹೆಚ್ಚುವರಿ ಶಿಕ್ಷಕಿ ಎಂಬ ನೆಲೆಯಲ್ಲಿ ವರ್ಗಾವಣೆಗೊಳಿಸಲಾಗುತ್ತಿದೆ ಮತ್ತು ಇರುವ ನಾಲ್ಕು ಶಿಕ್ಷಕಿಯರಲ್ಲಿ ಓರ್ವರನ್ನು ನಿಯೋಜನೆ ಮೇರೆಗೆ ಬೇರೆಡೆ ಕಳುಹಿಸಲಾಗುವ ಕ್ರಮವನ್ನು ವಿರೋಧಿಸಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದೇ ತಾವು ಶಾಲೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು.



ಶಾಲೆಯಲ್ಲಿ ಒಟ್ಟು 95 ವಿದ್ಯಾರ್ಥಿಗಳಿದ್ದು, ನಾಲ್ಕು ಮಂದಿ ಶಿಕ್ಷಕಿಯರಿದ್ದಾರೆ. ಅದರಲ್ಲಿ ಓರ್ವ ಶಿಕ್ಷಕಿಯನ್ನು ನಿಯೋಜನೆ ಮೇರೆಗೆ ಕಳುಹಿಸಲಾಗಿದೆ. ಮುಖ್ಯ ಶಿಕ್ಷಕಿಯನ್ನು ಏಕಾಏಕಿ ವರ್ಗಾವಣೆಗೊಳಿಸುವುದರಿಂದ ಶಾಲೆಯ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಸರಕಾರದ ಈ ನಡೆ ಸರಿಯಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಸರಕಾರದ ಆದೇಶದ ಮೇರೆಗೆ ಇಲಾಖೆಯ ಮೇಲಧಿಕಾರಿಗಳ ಸೂಚನೆ ಪ್ರಕಾರ ಕನ್ನಡ ಭಾಷಾ ಶಿಕ್ಷಕಿಯನ್ನು ಹೆಚ್ಚುವರಿ ಎಂದು ಪರಿಗಣಿಸಿ ವರ್ಗಾವಣೆಗೊಳಿಸಲಾಗುತ್ತಿದೆ ಎಂದು ಸ್ಥಳಕ್ಕಾಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದರು.
ಬಳಿಕ ದ.ಕ.ಜಿಲ್ಲಾ ಉಪನಿರ್ದೇಶಕರ ಜತೆ ದೂರವಾಣಿ ಮೂಲಕ ಮಾತನಾಡಿದ ಬಂಗೇರ ಅವರು ಸಮಸ್ಯೆ ಬಗ್ಗೆ ತಿಳಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿಯೂ, ಪೋಷಕರು ಪ್ರತಿಭಟನೆ ನಿಲ್ಲಿಸಲು ವಿನಂತಿಸಿದ ಮೆರೆಗೆ ಪೋಷಕರು ಪ್ರತಿಭಟನೆ ನಿಲ್ಲಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಮುದಿಮಾರ ಹಾಗೂ ಸದಸ್ಯರು, ಸ್ಥಳೀಯ ಪ್ರಮುಖರಾದ ರಾಮಕೃಷ್ಣ ಮಯ್ಯ, ಸುದರ್ಶನ ಬಜ, ಮೋನಪ್ಪ ಪೂಜಾರಿ ಹಾಗೂ ಪೋಷಕರು ಉಪಸ್ಥಿತರಿದ್ದರು.