ಕುಂದಾಪುರ, ಆ. 31 (DaijiworldNews/AA): ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸರಿಂದ ನಾಲ್ವರು ಅಂತಾರಾಜ್ಯ ಕಳ್ಳರನ್ನು ವಾರೆಂಟ್ ಮೂಲಕ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಬಂಧಿತರನ್ನು ಮಹಾರಾಷ್ಟ್ರದ ಸೊಲ್ಲಾಪುರ ನಿವಾಸಿಗಳಾದ ವಿವೇಕ್ ಅಂಬರ್(26), ಅಜೀಜ್ ಅಲಿಯಾಸ್ ಛೋಟೆ (28), ಲಖನ್ ಶೋಕ್ ಕುಲಕರ್ಣಿ (31) ಮತ್ತು ಸಂದೀಪ್ ದಿಲೀಪ್ (25) ಎಂದು ಗುರುತಿಸಲಾಗಿದೆ.
ಜುಲೈ 19 ರಂದು ಆರೋಪಿಗಳು ಕುಂದಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಿ.ಬಿ. ರಸ್ತೆಯ ವೆಸ್ಟ್ ಬ್ಲಾಕ್ನಲ್ಲಿರುವ ರೋಹಿತ್ ಎಂಬುವವರ ಮನೆಗೆ ಯಾರೂ ಇಲ್ಲದ ವೇಳೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೆ, ಕುಂದಾಪುರದಲ್ಲಿರುವ ಪಿ. ರವೀಂದ್ರ ಅವರ ಮನೆಯಲ್ಲಿ 4.57 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳವುಗೈದಿದ್ದರು. ಇದರ ಜೊತೆಗೆ ಹಳಿಯಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ನಡೆದ ಕಳ್ಳತನದಲ್ಲಿ ಭಾಗಿಯಾಗಿದ್ದರು.
ಆರೋಪಿಗಳ ವಿಚಾರಣೆ ವೇಳೆ, ಅವರು ಕುಂದಾಪುರ ಕಳ್ಳತನಗಳಲ್ಲಿ ತಮ್ಮ ಪಾತ್ರವನ್ನು ಬಹಿರಂಗಪಡಿಸಿದ್ದಾರೆ. ಇದರ ಆಧಾರದ ಮೇಲೆ, ಕುಂದಾಪುರ ಪೊಲೀಸರು ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಬಂಧಿತರ ಪೈಕಿ ಲಖನ್ ವಿರುದ್ಧ ಕರ್ನಾಟಕದ ವಿವಿಧ ಭಾಗಗಳಲ್ಲಿ 28 ಪ್ರಕರಣಗಳು, ಜೊತೆಗೆ ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಈಗಾಗಲೇ ಮೂರು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದಾನೆ. ಅಜೀಜ್ ವಿರುದ್ಧ ಕರ್ನಾಟಕದಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಮಹಾರಾಷ್ಟ್ರದಲ್ಲಿಯೂ ಪ್ರಕರಣಗಳು ದಾಖಲಾಗಿವೆ. ಸಂದೀಪ್ ವಿರುದ್ಧ ಮಹಾರಾಷ್ಟ್ರದಲ್ಲಿ ದರೋಡೆ ಮತ್ತು ಕಳ್ಳತನ ಪ್ರಕರಣಗಳು ದಾಖಲಾಗಿವೆ.