ಮಂಗಳೂರು, ಆ. 31 (DaijiworldNews/AA): ರಸ್ತೆಯಲ್ಲಿನ ಗುಂಡಿಯಿಂದಾಗಿ ವೇಗವಾಗಿ ಬಂದ ಸ್ಕೂಟಿಯೊಂದು ಸ್ಕಿಡ್ ಆಗಿ ಸವಾರ ರಸ್ತೆಗೆ ಬಿದ್ದಿದ್ದು, ಬಸ್ ಚಾಲಕನ ಸಮಯಪ್ರಜ್ಞೆಯಿಂದ ಸಂಭವನೀಯ ಅನಾಹುತ ತಪ್ಪಿದ ಘಟನೆ ನಂತೂರು ಜಂಕ್ಷನ್ನಲ್ಲಿ ಆಗಸ್ಟ್ 30 ರಂದು ಸಂಭವಿಸಿದೆ.

ಆ. 30ರ ಸಂಜೆ 8.45ರ ಸುಮಾರಿಗೆ ಕೆಪಿಟಿಯಿಂದ ನಂತೂರು ಕಡೆಗೆ ಹೋಗುತ್ತಿದ್ದ ರಾಜಲಕ್ಷ್ಮಿ ಬಸ್ ಅನ್ನು ಶಶಿಧರ್ ಶೆಟ್ಟಿ ಅವರು ಚಲಾಯಿಸುತ್ತಿದ್ದರು. ಈ ವೇಳೆ, ವೇಗವಾಗಿ ಬಂದ ಸ್ಕೂಟಿ ರಸ್ತೆಯಲ್ಲಿದ್ದ ದೊಡ್ಡ ಗುಂಡಿಗೆ ಡಿಕ್ಕಿ ಹೊಡೆದು ಸ್ಕಿಡ್ ಆಗಿ ಸವಾರ ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ ಸ್ಕೂಟಿ ಹಿಂದೆ ಬರುತ್ತಿದ್ದ ಬಾಲಕ ಶಶಿಧರ್ ಅವರು ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕುವ ಮೂಲಕ ಸಂಭವನೀಯ ದುರಂತವನ್ನು ತಪ್ಪಿಸಿದ್ದಾರೆ.
ಈ ಘಟನೆಯು ಬಸ್ನ ಡ್ಯಾಶ್-ಕ್ಯಾಮ್ನಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಾಲಕನ ಸಮಯಪ್ರಜ್ಞೆಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಈ ಘಟನೆಯು ನಂತೂರಿನಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಹಲವು ಕಡೆಗಳಲ್ಲಿ ರಸ್ತೆ ಗುಂಡಿಗಳಿಂದಾಗುವ ಅಪಾಯಗಳಿಗೆ ಉದಾಹರಣೆಯಾಗಿದೆ. ಈ ಗುಂಡಿಗಳು ವಾಹನ ಸವಾರರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿವೆ. ಹೆಚ್ಚಿನ ಅಪಘಾತಗಳು ಸಂಭವಿಸುವ ಮೊದಲು ರಸ್ತೆಗಳನ್ನು ದುರಸ್ತಿ ಮಾಡಲು ಅಧಿಕಾರಿಗಳು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.