ಮಂಗಳೂರು, ಸೆ. 04 (DaijiworldNews/AA): ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ ಎಂಬ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನ ಪ್ರಾರಂಭವಾಗಿದ್ದು, ಅ. 7ರ ವರೆಗೆ ನಡೆಯಲಿದೆ ಎಂದು ದ.ಕ ಜಿಲ್ಲಾ ಪ್ರಧಾನ ನ್ಯಾಯಾಧೀಶ ಬಸವರಾಜ್ ತಿಳಿಸಿದ್ದಾರೆ.

ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ವೈವಾಹಿಕ ಹಾಗೂ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ವಾಣಿಜ್ಯ ಮತ್ತು ಸೇವಾ ಪ್ರಕರಣಗಳು, ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಗ್ರಾಹಕರ ವ್ಯಾಜ್ಯ ಪ್ರಕರಣಗಳು, ಡಿ.ಆರ್.ಟಿ. ಪ್ರಕರಣಗಳು, ಭೂ-ಸ್ವಾಧೀನ ಪ್ರಕರಣಗಳು ಹಾಗೂ ಇತರ ಸಿವಿಲ್ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕರು ತಮ್ಮ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸಿದ್ದಲ್ಲಿ ನ್ಯಾಯಾಲಯಗಳಿಂದ ಪ್ರಕರಣಗಳನ್ನು ಮಧ್ಯಸ್ಥಿಕಾ ಕೇಂದ್ರಕ್ಕೆ ಸೂಚಿಸಲಾಗುತ್ತದೆ. ಆಗ ದಕ್ಷಿಣ ಕನ್ನಡ ನ್ಯಾಯಾಲಯ ಸಮುಚ್ಚಯದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲೂಕು ನ್ಯಾಯಾಲಯಗಳ ಆವರಣಗಳಲ್ಲಿರುವ ಮಧ್ಯಸ್ಥಿಕಾ ಕೇಂದ್ರಗಳಿಗೆ ಉಭಯ ಪಕ್ಷದವರನ್ನು ಕರೆಯಿಸಲಿದ್ದು, ಚರ್ಚಿಸಿ ಇತ್ಯರ್ಥಪಡಿಸಿಕೊಳ್ಳಬಹುದು. ಹೈಕೋರ್ಟ್ಗಳಲ್ಲಿ ಪ್ರಕರಣಗಳಿದ್ದರೆ ಸಂಬಂಧಪಟ್ಟವರು ಹೈಕೋರ್ಟ್ನ ಬೆಂಗಳೂರು, ಧಾರವಾಡ ಅಥವಾ ಕಲಬುರಗಿ ಆವರಣಗಳಲ್ಲಿರುವ ಮಧ್ಯಸ್ಥಿಕಾ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದರು.