ಮೂಡುಬಿದಿರೆ, ಸೆ. 05 (DaijiworldNews/AA): ನಿಡೋಡಿ-ಕಟೀಲು ರಸ್ತೆಯಲ್ಲಿ 10 ವರ್ಷಗಳ ಹಿಂದೆ ಬಸ್ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸ್ ಚಾಲಕ ಶ್ರೀನಿವಾಸ ಆರ್.ಎಂ. ಶಿಕ್ಷೆ ವಿಧಿಸಲಾಗಿದೆ.

ಭಾ.ದಂ.ಸಂಹಿತೆ ಕಲಂ 279ರನ್ವಯ 6 ತಿಂಗಳ ಸಾದಾ ಕಾರಾಗೃಹ ವಾಸ ಮತ್ತು 500 ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 7 ದಿನ ಸಾದಾ ಕಾರಾಗೃಹವಾಸ, ಭಾ.ದಂ.ಸಂಹಿತೆ 338ರನ್ವಯ 2 ವರ್ಷ ಸಾದಾ ಕಾರಾಗೃಹ ವಾಸ ಮತ್ತು 500 ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 7 ದಿನಗಳ ಸಾದಾ ಕಾರಾಗೃಹ ವಾಸ ಮತ್ತು ಭಾ.ದಂ.ಸಂಹಿತೆ 304 (ಎ) ಪ್ರಕಾರ 2 ವರ್ಷಗಳ ಸಾದಾ ಕಾರಾಗೃಹ ವಾಸ ಮತ್ತು 5,000 ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 30 ದಿನಗಳ ಸಾದಾ ಕಾರಾಗೃಹ ವಾಸ ಶಿಕ್ಷೆ ವಿಧಿಸಲಾಗಿದೆ. ಆರೋಪಿಯು ಈ ಮೂರೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕು ಎಂದು ಮೂಡುಬಿದಿರೆ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ಕಾವೇರಮ್ಮ ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ
2015ರ ಡಿ. 30ರಂದು ಅಪರಾಹ್ನ ಕಟೀಲಿನಿಂದ ನಿಡೋಡಿಯತ್ತ ಬರುತ್ತಿದ್ದ ಬೈಕಿಗೆ ನಿಡೋಡಿ ಕಡೆಯಿಂದ ಕಟೀಲಿನತ್ತ ಸಾಗುತ್ತಿದ್ದ ಬಸ್ ನಿದ್ದೋಡಿ ಗ್ರಾಮದ ಕಲ್ಲಕುಮೇರಿನಲ್ಲಿ ಢಿಕ್ಕಿ ಹೊಡೆದಿತ್ತು. ಚಾಲಕ ಶ್ರೀನಿವಾಸ ಅವರು ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದೇ ದುರ್ಘಟನೆಗೆ ಕಾರಣವೆನ್ನಲಾಗಿದೆ. ಬೈಕ್ ಸವಾರ ಮುರಳೀಧರ ಬೆಳಿರಾಯರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಸಹಸವಾರ ಲಕ್ಷ್ಮೀನಾರಾಯಣ ಜೆನ್ನಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು.