ಕುಂದಾಪುರ, ಸೆ. 08 (DaijiworldNews/AA): ಬೆಂಗಳೂರಿನಿಂದ ಬಂದಿದ್ದ ಹತ್ತು ವಿದ್ಯಾರ್ಥಿಗಳಲ್ಲಿ ಒಂಬತ್ತು ಮಂದಿ ಸಮುದ್ರದಲ್ಲಿ ಈಜಲು ಇಳಿದಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಸಾವನ್ನಪ್ಪಿದ ಘಟನೆ ಶನಿವಾರ ಕುಂದಾಪುರ ಗೋಪಾಡಿಯ ಚರ್ಕಿಕಡು ಬೀಚ್ನಲ್ಲಿ ಸಂಭವಿಸಿದೆ.


ಮೃತಪಟ್ಟವರನ್ನು ಬೆಂಗಳೂರಿನ ಗೌತಮ್ (19), ಲೋಕೇಶ್ (19), ಮತ್ತು ಆಶೀಶ್ (18) ಎಂದು ಗುರುತಿಸಲಾಗಿದೆ. ನಿರೂಪ್ (19) ತೀವ್ರ ಅಸ್ವಸ್ಥಗೊಂಡಿದ್ದು, ಪ್ರಸ್ತುತ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಧನುಷ್, ರಾಹುಲ್, ಅಂಜನ್, ಕುಶಾಲ್, ಅನೀಶ್, ನಿತಿನ್, ನಿರೂಪ್, ಲೋಕೇಶ್, ಗೌತಮ್ ಮತ್ತು ಆಶೀಶ್ ಸೇರಿದಂತೆ ಹತ್ತು ಸ್ನೇಹಿತರು ಬೆಂಗಳೂರಿನಿಂದ ರೈಲಿನಲ್ಲಿ ಕುಂದಾಪುರಕ್ಕೆ ಪ್ರಯಾಣ ಬೆಳೆಸಿದ್ದರು. ಇವರು ಕುಂಭಾಶಿಯ ಲಾಡ್ಜ್ ಒಂದರಲ್ಲಿ ತಂಗಿದ್ದರು.
ಭಾನುವಾರ ಬೆಳಗ್ಗೆ, ಈ ತಂಡವು ಗೋಪಾಡಿ ಚರ್ಕಿಕಡು ಕಡಲತೀರಕ್ಕೆ ಈಜಲು ತೆರಳಿತ್ತು. ಈ ವೇಳೆ ಸ್ಥಳೀಯರು ಇದು ಅಪಾಯಕಾರಿ ಸ್ಥಳ, ಆಳವಿದೆ ಎಂದು ಎಚ್ಚರಿಕೆ ನೀಡಿದ್ದರು. ಸ್ಥಳೀಯರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಯುವಕರು ಸ್ವಲ್ಪ ಹೊತ್ತು ನೀರಿನಲ್ಲಿ ಈಜಾಡಿ ಬಳಿಕ ತೆರಳಿದ್ದರು.
ಆದರೆ ಮಧ್ಯಾಹ್ನ ಸುಮಾರು 1:40 ಸುಮಾರಿಗೆ ಹತ್ತು ಮಂದಿ ಮತ್ತೆ ಈಜಲು ಬೀಚ್ಗೆ ಬಂದಿದ್ದರು. ಈ ವೇಳೆಯೂ ಸ್ಥಳೀಯರು ಎಚ್ಚರಿಕೆ ನೀಡಿದ್ದರು. ಆದರೆ ಈ ಪೈಕಿ 9 ಮಂದಿ ಈಜಲು ಕಡಲಿಗಿಳಿದಿದ್ದರು. ಮೊದಲಿಗೆ 7 ಮಂದಿ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದ್ದಾರೆ.
ಈ ವೇಳೆ ಜೊತೆಗಿದ್ದ ಕುಶಾಲ್ ಇಬ್ಬರನ್ನು ಮೇಲಕ್ಕೆ ಎತ್ತಿ ಹಾಕಿ ರಕ್ಷಣೆ ಮಾಡಿದ್ದಾರೆ. ಇನ್ನೊಬ್ಬನನ್ನು ಧನುಷ್ ರಕ್ಷಿಸಿದ್ದನು. ಬಳಿಕ ನಾಲ್ವರು ಯುವಕರು ನೀರುಪಾಲಾಗುತ್ತಿದ್ದನ್ನು ಕಂಡ ಸ್ಥಳಿಯ ನಿವಾಸಿ ಉಮೇಶ್ ಪೂಜಾರಿ ಓಡಿ ಬಂದು ನಿರೂಪ್ನನ್ನು ರಕ್ಷಿಸಿದ್ದಾರೆ. ಆದರೆ, ಅಷ್ಟರಲ್ಲಿ ಉಳಿದ ಮೂವರು ಸಮುದ್ರದ ಅಲೆಗಳಿಗೆ ಕೊಚ್ಚಿ ಹೋಗಿದ್ದಾರೆ.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸ್ಥಳಕ್ಕೆ ಭೇಟಿ ನೀಡಿ, ಸಮುದ್ರದ ಪರಿಸ್ಥಿತಿ ಬಿರುಸಾಗಿರುವಾಗ ಪ್ರವಾಸಿಗರು ಪ್ರಾಣಾಪಾಯಕ್ಕೆ ಸಿಲುಕಿಕೊಳ್ಳದಂತೆ ಮನವಿ ಮಾಡಿದರು.
ಮೃತಪಟ್ಟ ಮೂವರ ಯುವಕರ ಮೃತದೇಹಗಳನ್ನು ಕುಂದಾಪುರ ಸರ್ಕಾರಿ ಶವಾಗಾರಕ್ಕೆ ತರಲಾಗಿದ್ದು, ನಂತರ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.