ಬಂಟ್ವಾಳ, ಸೆ. 14 (DaijiworldNews/AA): ಕೃಷಿಯತ್ತ ಯುವ ಸಮುದಾಯ ಒಲವು ಹೊಂದಿದ್ದು, ಆಧುನಿಕತೆಯ ಸ್ಪರ್ಶವನ್ನು ನೀಡಿ, ಉತ್ತಮ ಇಳುವರಿಯನ್ನು ಪಡೆದ ಬಳಿಕ ಮಾರುಕಟ್ಟೆ ಸೃಷ್ಟಿಸಿದರೆ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.







ಅವರು ಕಡೇಶಿವಾಲಯ ಗ್ರಾಮದ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಒಡ್ಡೂರು ಫಾರ್ಮ್ ಹೌಸ್ ನ ಸಭಾಂಗಣದಲ್ಲಿ ನಡೆದ ರೈತ ಉತ್ಪಾದಕ ಸಂಸ್ಥೆ ನಿರ್ಮಾಣದ ಬಗ್ಗೆ ಮಾಹಿತಿ ಹಾಗೂ ಕೃಷಿ ಚಟುವಟಿಕೆಗಳ ವಿಶೇಷ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
"ರೈತ ಉತ್ಪಾದಿಸಿದ ಎಲ್ಲಾ ವಸ್ತುಗಳಿಗೂ ಉತ್ತಮವಾದ ಮಾರುಕಟ್ಟೆ ವ್ಯವಸ್ಥೆ ಇದ್ದು, ಇದರ ಸದುಪಯೋಗ ಪಡೆದುಕೊಳ್ಳುವಲ್ಲಿ ರೈತರು ಎಡವಿರುವುದೇ ಒಂದಷ್ಟು ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಅಥವಾ ಇತರ ಸಾಮಾಜಿಕ ಮಾಧ್ಯಮ ಕೃಷಿ ವಿಚಾರದಲ್ಲಿ ಆಸಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ಅನೇಕ ಮಾಹಿತಿಗಳನ್ನು ಪಡೆಯಲು ಸಾಧ್ಯವಾಗಿದೆ. ಇದರ ಜೊತೆಗೆ ಇಲಾಖೆಯ ಜೊತೆ ಸಂಪರ್ಕ ಇರಿಸಿಕೊಂಡು ಯೋಜನೆಗಳ ಮೂಲಕ ಆಧುನಿಕತೆಯ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಆಸಕ್ತಿ ವಹಿಸಬೇಕು" ಎಂದರು.
ಕೃಷಿ ಮೂಲಕ ಬದುಕು ಕಟ್ಟಿಕೊಂಡ ಕರಾವಳಿಯ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಕೃಷಿಕರಾಗಿದ್ದಾರೆ. ಕೃಷಿಯೇ ಜಿಲ್ಲೆಯ ಮೂಲಮಂತ್ರವಾಗಿದ್ದು, ಯಾಂತ್ರಿಕ ವ್ಯವಸ್ಥೆ ಮೂಲಕ ಕೃಷಿಯಲ್ಲಿ ಲಾಭ ಪಡೆಯುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಪಡೆಯಲು ತಿಳಿಸಿದರು.
"ಮಹಿಳೆಯರು ಸ್ವತಂತ್ರ ಬದುಕು ನಡೆಸಬೇಕು ಎಂಬ ಸದುದ್ದೇಶದಿಂದ ಕೃಷಿ ಉತ್ಪಾದನಾ ಕಂಪೆನಿ ನಿರ್ಮಿಸಲು ಕೇಂದ್ರ ಸರಕಾರ 90 ಪರ್ಸೆಂಟ್ ವರೆಗೆ ಸಹಾಯಧನವನ್ನು ಪಡೆಯುವ ಅವಕಾಶಗಳಿವೆ. ಇದರ ಸದುಪಯೋಗ ಪಡೆದು ಕಂಪೆನಿಗಳನ್ನು ನಿರ್ಮಿಸಿದರೆ ದ.ಕ.ಜಿಲ್ಲೆಯ ಪ್ರತಿ ಗ್ರಾಮಗಳು ಕೃಷಿ ಚಟುವಟಿಕೆ ಮೂಲಕ ಅರ್ಥಿಕ ವ್ಯವಸ್ಥೆ ಸದೃಡಗೊಳ್ಳಬಹುದು. ಜೊತೆಗೆ ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಿದರೆ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನೀವು ಕಾರಣವಾಗಬಹುದು. ಮನಸ್ಸು ಮತ್ತು ಉತ್ತಮ ಉದ್ದೇಶವಿಟ್ಟುಕೊಂಡು ಉದ್ಯೋಗ ಮಾಡಿದರೆ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ" ಎಂದು ಹೇಳಿದರು.
ಕೇಂದ್ರ ಸರಕಾರದ ಹಲವಾರು ಯೋಜನೆಗಳ ಮೂಲಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡುವುದು ನನ್ನ ಉದ್ದೇಶವಾಗಿದ್ದು, ಕೃಷಿ ಚಟುವಟಿಕೆಯಲ್ಲಿ ಮಹಿಳೆಯರನ್ನು ಹೆಚ್ಚು ತೊಡಗಿಸಿಕೊಂಡು ಯಶಸ್ಸು ಗಳಿಸಲು ಬೇಕಾದ ಸಹಾಯವನ್ನು ಮಾಡುವ ಮೊದಲ ಪ್ರಯತ್ನ ಆಗಿದೆ. ಕಡೇಶಿವಾಲಯ ಗ್ರಾ.ಪಂ.ನ ಸಂಜೀವಿನಿ ಮಹಿಳಾ ಒಕ್ಕೂಟ ಯಶಸ್ಸು ಕಂಡರೆ ಮುಂದೆ ಬಂಟ್ವಾಳ ತಾಲೂಕಿನ ಪ್ರತಿ ಗ್ರಾಮದಲ್ಲಿಯೂ ಇದೇ ಮಾದರಿಯಲ್ಲಿ ಕಂಪೆನಿ ರಚನೆಗೆ ನಾನು ಪ್ರಯತ್ನ ಮಾಡುವ ಭರವಸೆ ನೀಡಿದರು.
ಕೃಷಿ ಇಲಾಖೆಯ ನಿರ್ದೇಶಕ ಕೃಷಿ ನಿರ್ದೇಶಕಿ ಡಾ.ವೀಣಾ ರೈ ಅವರು ಮಹಿಳೆಯರು ಗ್ರಾಮೀಣ ಭಾಗದಲ್ಲಿ ಸಮೂಹವಾಗಿ ಕೃಷಿ ಉತ್ಪನ್ನಗಳನ್ನು ಬೆಳೆದು ಕಂಪೆನಿ ಮೂಲಕ ಮಾರುಕಟ್ಟೆ ಹೇಗೆ ಮಾಡಬಹುದು ಮತ್ತು ಇದರಿಂದ ಬರುವ ಲಾಭವೇನು? ಎಂಬುದರ ಬಗ್ಗೆ ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿ.ಸೋಜ, ಅವರು ಮಾತನಾಡಿ ಕೃಷಿಕರು ಆರ್ಥಿಕವಾಗಿ ಸದೃಢ ಹೆಜ್ಜೆಯನ್ನು ಇಡಲು ಅನೇಕ ಯೋಜನೆಗಳನ್ನು ಸರಕಾರ ಜಾರಿ ಮಾಡಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದ ಅವರು, ಸ್ವಾವಲಂಬಿ ಜೀವನಕ್ಕೆ ಮಹಿಳೆಯರು ಸಂಘ ವ್ಯವಸ್ಥೆ ಮೂಲಕ ಹೇಗೆ ಕಂಪೆನಿಯನ್ನು ಮಾಡಬಹುದು, ಮತ್ತು ಕೃಷಿಯ ಉತ್ಪಾದನೆ ಹೇಗೆ ಮಾಡಬಹುದು. ಯಾವೆಲ್ಲ ಕೃಷಿಯನ್ನು ಮಾಡುವ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಕಂಪೆನಿ ತಯಾರಿಸಲು ಸರಕಾರ ನೀಡುವ ಧನ ಸಹಾಯ ಮತ್ತು ಅದನ್ನು ಪಡೆಯಲು ಮಾಡಬೇಕಾದ ಮಾಹಿತಿಯನ್ನು ನೀಡಿದರು.
ಕಡೇಶಿವಾಲಯ ಗ್ರಾ.ಪಂ.ಅಧ್ಯಕ್ಷೆ ಭಾರತೀ ಎಸ್ ರಾವ್, ರೈತ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿದ್ಯಾಧರ ರೈ, ಮಾತೃ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಬಬಿತಾ ಅವರು ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯರಾದ ಸನತ್ ಆಳ್ವ, ಸುರೇಶ್ ಬನಾರಿ, ಜಯ ಆರ್ ಮತ್ತು ದೇವಿಪ್ರಸಾದ್ ಶೆಟ್ಟಿ, ಅವರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಕಡೇಶಿವಾಲಯ ಗ್ರಾ.ಪಂ.ಪಿ.ಡಿ.ಒ.ಸುನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.