ಮಂಗಳೂರು, ಸೆ. 15 (DaijiworldNews/AK): ಮೀನುಗಾರಿಕೆಗಾಗಿ ಆಳ ಸಮುದ್ರಕ್ಕೆ ತೆರಳಿದ್ದ ಮೀನುಗಾರಿಕೆ ಬೋಟ್ ಎಂಜಿನ್ ವೈಫಲ್ಯದಿಂದ ಸಮುದ್ರ ತಟದ ಕಲ್ಲು ಬಂಡೆಗಳಿಗೆ ಬಡಿದು ಪಲ್ಟಿ ಹೊಡೆದ ಘಟನೆ ಉಳ್ಳಾಲ ಸೀಗ್ರೌಂಡ್ನಲ್ಲಿ ಸೋಮವಾರ ಮುಂಜಾನೆ ಘಟನೆ ನಡೆದಿದೆ. ಹಡಗಿನಲ್ಲಿದ್ದ 13 ಮೀನುಗಾರರ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ.

ಬುರಾಕ್ ಟ್ರಾಲರ್ ಎಂಬ ದೋಣಿ ಉಳ್ಳಾಲದ ಮುಕ್ಕಚ್ಚೇರಿ ನಿವಾಸಿ ಮೊಹಮ್ಮದ್ ಅಶ್ಫಾಕ್ ಅವರಿಗೆ ಸೇರಿದ್ದು, ಭಾನುವಾರ ರಾತ್ರಿ ಈ ಹಡಗು ಮಂಗಳೂರು ಬಂದರಿನಿಂದ ಕೇರಳದ ಕಡೆಗೆ ಆಳ ಸಮುದ್ರ ಮೀನುಗಾರಿಕೆಗಾಗಿ ಹೊರಟಿತ್ತು.
ಅದೃಷ್ಟವಶಾತ್, ಸಮುದ್ರ ಅಲೆಗಳ ಹೊಡೆತಕ್ಕೆ ಸಿಲುಕಿ, ದೋಣಿ ಕರಾವಳಿಯ ಕಡೆಗೆ ಸಾಗಿ ಸೋಮವಾರ ಮುಂಜಾನೆ ಸೀಗ್ರೌಂಡ್ ಬಳಿ ಎಂಜಿನ್ ಹಠಾತ್ತಾಗಿ ಬಂದ್ ಆಗಿ ಕಡಲ ತೀರಕ್ಕೆ ಡಿಕ್ಕಿ ಹೊಡೆದಿದೆ. 13 ಮೀನುಗಾರರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಈ ಘಟನೆಯಿಂದ ದೋಣಿ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.